ಡೈಲಿವಾರ್ತೆ:30/ಅ./2026

ಕುಂದಾಪುರ: ಬಳ್ಕೂರಿನಲ್ಲಿ ಅಕ್ರಮ ಕೆಂಪು ಮಣ್ಣು ಸಾಗಾಟದ ಟಿಪ್ಪರ್‌ಗಳ ಅಟ್ಟಹಾಸ: ಕಾಲೇಜು ವಿದ್ಯಾರ್ಥಿಗಳಿದ್ದ ಸ್ಕೂಟರ್‌ಗೆ ಡಿಕ್ಕಿ, ಇಬ್ಬರಿಗೆ ಗಂಭೀರ ಗಾಯ

ಕುಂದಾಪುರ: ಪರವಾನಗಿ ಇಲ್ಲದೆ ಕೋಜೆ ಮಣ್ಣನ್ನು ಸಾಗಿಸುತ್ತಿದ್ದ ಟಿಪ್ಪರ್‌ಗಳ ಅಡ್ಡಾದಿಡ್ಡಿ ಚಾಲನೆಯಿಂದ ಸಂಭವಿಸಿದ ಅಪಘಾತದಲ್ಲಿ ಕಾಲೇಜಿಗೆ ತೆರಳುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡ ಘಟನೆ ಅಕ್ಟೋಬರ್ 30ರಂದು ಬೆಳಿಗ್ಗೆ ಕುಂದಾಪುರ ತಾಲೂಕಿನ ಬಳ್ಕೂರು ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನದ ಬಳಿ ರಾಜ್ಯ ಹೆದ್ದಾರಿ 52ರಲ್ಲಿ ನಡೆದಿದೆ.

ಗಾಯಾಳುಗಳನ್ನು ಟಿ.ಕೆ. ಮೊಹಮ್ಮದ್ ಶಯಾನ್ ಮತ್ತು ಮೊಹಮ್ಮದ್ ರಯಾನ್ ಎಂದು ಗುರುತಿಸಲಾಗಿದ್ದು, ಇಬ್ಬರನ್ನೂ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಅಕ್ಟೋಬರ್ 30ರಂದು ಬೆಳಿಗ್ಗೆ ಸುಮಾರು 8.45ಕ್ಕೆ ಕುಂದಾಪುರ ಕಡೆಯಿಂದ ಎರಡು ಟಿಪ್ಪರ್‌ಗಳು ಬರುತ್ತಿದ್ದವು. ಈ ವೇಳೆ ಮುಂಭಾಗದಲ್ಲಿ ಸಂಚರಿಸುತ್ತಿದ್ದ ಟಿಪ್ಪರ್ ಚಾಲಕನು ಎದುರಿನಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಅನ್ನು ಗಮನಿಸಿ ವಾಹನದ ವೇಗವನ್ನು ಕಡಿಮೆ ಮಾಡಿದ್ದಾನೆ. ಹಿಂಬದಿಯಿಂದ ಬರುತ್ತಿದ್ದ ಮತ್ತೊಂದು ಟಿಪ್ಪರ್‌ನ ಚಾಲಕ ಅತಿವೇಗವಾಗಿ ಬಂದು ಮುಂಭಾಗದ ಟಿಪ್ಪರ್‌ಗೆ ಡಿಕ್ಕಿ ಹೊಡೆದಿದ್ದಾನೆ.
ಬಳಿಕ ನಿಯಂತ್ರಣ ತಪ್ಪಿದ ಟಿಪ್ಪರ್ ರಸ್ತೆಯ ಬಲಭಾಗಕ್ಕೆ ಚಲಿಸಿ, ಕಂಡ್ಲೂರು ಕಡೆಯಿಂದ ಬಸ್ರೂರು ಕಡೆಗೆ ಕಾಲೇಜಿಗೆ ತೆರಳುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರ್‌ನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.

ಅಪಘಾತಕ್ಕೆ ಕಾರಣವಾದ ಟಿಪ್ಪರ್‌ನಲ್ಲಿ ಯಾವುದೇ ಪರವಾನಗಿ ಇಲ್ಲದೆ ಕೋಜೆ ಮಣ್ಣನ್ನು ತುಂಬಿಕೊಂಡು ಸಾಗಾಟ ಮಾಡಲಾಗುತ್ತಿತ್ತು ಎಂಬುದು ಪೊಲೀಸ್ ತನಿಖೆಯ ಪ್ರಾಥಮಿಕ ಮಾಹಿತಿಯಲ್ಲಿ ಉಲ್ಲೇಖವಾಗಿದೆ.

ಘಟನೆಗೆ ಸಂಬಂಧಿಸಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 61/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಕಲಂ 110, 303(2), 238 ಹಾಗೂ 3(5), ಎಂಎಂಆರ್‌ಡಿ ಕಾಯ್ದೆಯ ಕಲಂ 4(1)(ಎ), 21(4) ಮತ್ತು ಮೋಟಾರು ವಾಹನ ಕಾಯ್ದೆಯ ಕಲಂ 134(ಎ), (ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಪ್ಪರ್ ಚಾಲಕರಾದ ನಾಗರಾಜ ಮತ್ತು ರತ್ವೀಜ್ ಹಾಗೂ ಕೋಜೆ ಮಣ್ಣು ತೆಗೆದ ಸ್ಥಳದ ಮಾಲೀಕ ಸೇರಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.