


ಡೈಲಿವಾರ್ತೆ:30/ಅ./2026




ಉತ್ತರಾಖಂಡ ಹೆಲಿಕಾಪ್ಟರ್ ದುರಂತ: ಬೆಂಗಳೂರಿನ ಐವರು ಸೇರಿ 6 ಮಂದಿ ಸಾವು, ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೃತದೇಹ ಪತ್ತೆ!

ಡೆಹ್ರಾಡೂನ್, ಅ. 30: ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಸಮೀಪ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಬೆಂಗಳೂರಿನ ಐವರು ಹಾಗೂ ಪೈಲಟ್ ಸೇರಿದಂತೆ ಒಟ್ಟು 6 ಮಂದಿ ಮೃತಪಟ್ಟಿದ್ದಾರೆ. ಬದರಿನಾಥ ಧಾಮದಲ್ಲಿ ದೇವರ ದರ್ಶನ ಮುಗಿಸಿ ಡೆಹ್ರಾಡೂನ್ನ ಸಹಸ್ರಧಾರಾಕ್ಕೆ ಮರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಮೃತರನ್ನು ಬೆಂಗಳೂರಿನ ಸಿಸಿಬಿ ಇನ್ಸ್ಪೆಕ್ಟರ್ ಅರುಣ್ ಸಾಲುಂಕೆ, ಎಚ್.ಎಸ್. ನಾಗರಾಜ್, ಪ್ರತಾಪ್ ಬಚಿಹಳ್ಳಿ ನಿಂಗರಾಜನ್, ಸುಧೀರ್ ಕೆ., ಶಂಕರಗೌಡ ವಿ.ಬಿ. ಹಾಗೂ ಪೈಲಟ್ ಹಿಮಾಂಶು ಸಭರ್ವಾಲ್ ಎಂದು ಗುರುತಿಸಲಾಗಿದೆ.
ಸಂಪರ್ಕ ಕಡಿತಗೊಂಡ ಬಳಿಕ ಹೆಲಿಕಾಪ್ಟರ್ ಪತನ:
ಐವರು ಸ್ನೇಹಿತರು ಉತ್ತರಾಖಂಡದ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ತೆರಳಿದ್ದು, ಗುರುವಾರ ಬದರಿನಾಥದಲ್ಲಿ ದರ್ಶನ ಮುಗಿಸಿ ಟ್ರಾನ್ಸ್ ಭಾರತ್ ಏವಿಯೇಷನ್ ಸಂಸ್ಥೆಯ ಹೆಲಿಕಾಪ್ಟರ್ನಲ್ಲಿ ವಾಪಸಾಗುತ್ತಿದ್ದರು. ಮಧ್ಯಾಹ್ನ 1.14ರ ಸುಮಾರಿಗೆ ಬದರಿನಾಥದಿಂದ ಹೊರಟ ಹೆಲಿಕಾಪ್ಟರ್, ಜೋಶಿಮಠದ ಕಣಿವೆ ಪ್ರದೇಶದ ಸಮೀಪ ಸಾಗುತ್ತಿದ್ದಾಗ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯೊಂದಿಗಿನ ಸಂಪರ್ಕ ಕಡಿತಗೊಂಡಿತ್ತು.
ನಂತರ ಜೋಶಿಮಠದ ಚಾಯೀ ಮತ್ತು ಥೈಂಗ್ ಗ್ರಾಮಗಳ ಸಮೀಪ ಹೆಲಿಕಾಪ್ಟರ್ ಪತನಗೊಂಡಿರುವ ಮಾಹಿತಿ ಲಭ್ಯವಾಯಿತು. ಭಾರತೀಯ ಸೇನೆ, ಜಿಲ್ಲಾಡಳಿತ ಹಾಗೂ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ತಂಡಗಳು ಶೋಧ ಕಾರ್ಯಾಚರಣೆ ನಡೆಸಿದವು. ಸಂಜೆಯ ವೇಳೆಗೆ ಪೈಲಟ್ ಸೇರಿದಂತೆ ಆರು ಮಂದಿಯ ಮೃತದೇಹಗಳ ಅವಶೇಷಗಳು ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಸಾಗಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ.
ಹವಾಮಾನ ವೈಪರೀತ್ಯದ ಶಂಕೆ:
ಪ್ರದೇಶದಲ್ಲಿ ಮಳೆ, ದಟ್ಟ ಮಂಜು ಹಾಗೂ ಕಡಿಮೆ ಗೋಚರತೆ ಇದ್ದುದರಿಂದ ಹವಾಮಾನ ವೈಪರೀತ್ಯ ಅಪಘಾತಕ್ಕೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ. ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿದ್ದ ಹಿನ್ನೆಲೆಯಲ್ಲಿ ಪ್ರತಿಕೂಲ ಪರಿಸ್ಥಿತಿಯಲ್ಲಿ ಹಾರಾಟಕ್ಕೆ ಅನುಮತಿ ನೀಡಿದ ಕುರಿತು ಪ್ರಶ್ನೆಗಳು ಎದ್ದಿವೆ. ಆದರೆ, ಅಪಘಾತದ ನಿಖರ ಕಾರಣ ಇನ್ನೂ ದೃಢಪಟ್ಟಿಲ್ಲ.
ಘಟನೆಯ ಬಳಿಕ ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರವು ಟ್ರಾನ್ಸ್ ಭಾರತ್ ಏವಿಯೇಷನ್ ಸಂಸ್ಥೆಯ ಹೆಲಿಕಾಪ್ಟರ್ಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಹೆಲಿಕಾಪ್ಟರ್ನ ತಾಂತ್ರಿಕ ಸ್ಥಿತಿ, ಹವಾಮಾನ ಪರಿಸ್ಥಿತಿ, ಪೈಲಟ್ಗೆ ನೀಡಲಾದ ಮಾಹಿತಿ ಹಾಗೂ ಸುರಕ್ಷತಾ ನಿಯಮಗಳ ಪಾಲನೆ ಕುರಿತು ತನಿಖೆ ನಡೆಯುವ ನಿರೀಕ್ಷೆಯಿದೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಘಟನೆಗೆ ಕಳವಳ ವ್ಯಕ್ತಪಡಿಸಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ತ್ವರಿತಗೊಳಿಸುವಂತೆ ಹಾಗೂ ಸಂತ್ರಸ್ತರ ಕುಟುಂಬಗಳಿಗೆ ಅಗತ್ಯ ನೆರವು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

