ಡೈಲಿವಾರ್ತೆ: 01/ನ./2026

ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದಿಂದ ವಿವಿಧ ಸಮುದಾಯಗಳ ಸ್ನೇಹ ಸಮಾವೇಶ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ: ಇದು ಭಾಷಣಗಳ ಪರ್ವವಲ್ಲ, ಪ್ರತಿಭಟನೆಗಳ ಪರ್ವ: ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಿದ್ಧರಾಗಬೇಕು – ಪ್ರಕಾಶ್ ರಾಜ್

ಉಡುಪಿ: ಪ್ರಸ್ತುತ ದೇಶದ ಪರಿಸ್ಥಿತಿಯಲ್ಲಿ ವೇದಿಕೆಗಳಲ್ಲಿ ನಿಂತು ಭಾಷಣ ಮಾಡುವುದಕ್ಕಿಂತ ಬೀದಿಗಿಳಿದು ಸಂವಿಧಾನ ಮತ್ತು ಮಾನವೀಯ ಮೌಲ್ಯಗಳನ್ನು ಕಾಪಾಡಲು ಹೋರಾಟ ನಡೆಸುವ ಅಗತ್ಯವಿದೆ. ಇದು ಪ್ರತಿಭಟನೆಗಳ ಪರ್ವ. ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮದಂತಿರುವ ಈ ಹೋರಾಟದಲ್ಲಿ ಎಲ್ಲರೂ ಸಹನೆ ಮತ್ತು ಬದ್ಧತೆಯಿಂದ ತೊಡಗಿಸಿಕೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಹಾಗೂ ನಟ ಪ್ರಕಾಶ್ ರಾಜ್ ಕರೆ ನೀಡಿದರು.

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಶನಿವಾರ ಉಡುಪಿ ಮಿಷನ್ ಕಂಪೌಂಡ್‌ನ ಯುಬಿಎಂಸಿ ಆಡಿಟೋರಿಯಂನಲ್ಲಿ ಆಯೋಜಿಸಲಾದ ಸ್ನೇಹ ಸಮಾವೇಶ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಮಾನವ ರತ್ನ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ದೇಶದಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯ ಬಗ್ಗೆ ಜನರಿಗೆ ತಾಳ್ಮೆಯಿಂದ ಮನವರಿಕೆ ಮಾಡಿಕೊಡಬೇಕು. ಪ್ರಸ್ತುತ ಆಡಳಿತದ ಅವಧಿಯಲ್ಲಿ ಕರಾವಳಿಯ ಪರಿಸ್ಥಿತಿ ಹದಗೆಟ್ಟಿದೆ, ಆರ್ಥಿಕತೆ ಕುಸಿದಿದೆ ಹಾಗೂ ಯುವಜನರ ಭವಿಷ್ಯಕ್ಕೆ ಧಕ್ಕೆಯಾಗಿದೆ ಎಂಬುದನ್ನು ಅಂಕಿ-ಅಂಶಗಳ ಮೂಲಕ ಜನರ ಮುಂದಿಡಬೇಕು. ಈ ವಿಚಾರಗಳನ್ನು ಆಧರಿಸಿ ಜನಜಾಗೃತಿ ಮೂಡಿಸುವ ಕೆಲಸವಾಗಬೇಕು. ಮುಂದಿನ ಎರಡು ವರ್ಷಗಳಲ್ಲಿ ಜಿಲ್ಲೆ ಜಿಲ್ಲೆಗಳಿಗೆ ತೆರಳಿ ಈ ಕಾರ್ಯವನ್ನು ಕೈಗೊಳ್ಳಬೇಕಿದೆ. ಈಗ ರಾಜಕೀಯ ಪಕ್ಷಗಳಿಗಿಂತ ಜನಪರವಾಗಿ ಮಾತನಾಡುವ ಧ್ವನಿಗಳ ಅಗತ್ಯ ಹೆಚ್ಚಾಗಿದೆ ಎಂದು ಹೇಳಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ಏಕೆ ರಚಿಸಿದರು ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದ ಭಾರತ ಮತ್ತೆ ದಬ್ಬಾಳಿಕೆಯ ವ್ಯವಸ್ಥೆಯ ಕೈಗೆ ಸಿಲುಕಬಾರದು ಎಂಬ ಆಶಯದಿಂದ ಸಂವಿಧಾನ ರೂಪಿಸಲಾಯಿತು. ಆದರೆ, ಇಂದು ಅದೇ ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಬೆಳವಣಿಗೆಗಳ ಬಗ್ಗೆ ಜನರು ಜಾಗೃತರಾಗಬೇಕು ಎಂದು ಪ್ರಕಾಶ್ ರಾಜ್ ಅಭಿಪ್ರಾಯಪಟ್ಟರು.

ಅಲ್ಪಸಂಖ್ಯಾತರನ್ನು ಗುರಿಯಾಗಿಸಲಾಗುತ್ತಿದೆ: ಸಚಿವ ರಿಜ್ವಾನ್ ಅರ್ಷದ್

ಪ್ರಶಸ್ತಿ ಪ್ರದಾನ ಮಾಡಿದ ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆ ಸಚಿವ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಮಾತನಾಡಿ, ಕೇಂದ್ರ ಸರ್ಕಾರ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಹೊಸ ಕಾನೂನುಗಳನ್ನು ಜಾರಿಗೆ ತರುತ್ತಿದೆ ಎಂದು ಆರೋಪಿಸಿದರು.
ದೇಶದ ಜನರ ಬದುಕನ್ನು ಸುರಕ್ಷಿತವಾಗಿಡುವ ಜವಾಬ್ದಾರಿಯಿಂದ ಸರ್ಕಾರ ನುಣುಚಿಕೊಳ್ಳುತ್ತಿದೆ. ಅಲ್ಪಸಂಖ್ಯಾತರು ನಿರಂತರವಾಗಿ ತೊಂದರೆ ಮತ್ತು ಕಿರುಕುಳ ಎದುರಿಸುತ್ತಿದ್ದಾರೆ. ಇದರ ವಿರುದ್ಧ ಧ್ವನಿ ಎತ್ತುವವರನ್ನು ದೇಶದ್ರೋಹಿಗಳೆಂದು ಬಿಂಬಿಸಲಾಗುತ್ತಿದೆ ಎಂದು ಅವರು ದೂರಿದರು.

ಶಿಕ್ಷಣಕ್ಕೆ ಆದ್ಯತೆ ನೀಡಲು ಎ.ಬಿ. ಇಬ್ರಾಹಿಂ ಕರೆ:

ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಮಾತನಾಡಿ, ಜಗತ್ತಿನ ಅನೇಕ ದೇಶಗಳಲ್ಲಿ ಅಲ್ಪಸಂಖ್ಯಾತರು ಮತ್ತು ಮೂಲನಿವಾಸಿಗಳು ನಿರಂತರ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರತಿನಿತ್ಯ ಹೋರಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಅಲ್ಪಸಂಖ್ಯಾತರು ಸರ್ಕಾರಿ ಸೌಲಭ್ಯಗಳಿಗಾಗಿ ಹೋರಾಟ ನಡೆಸುವುದರ ಜತೆಗೆ ಸಮುದಾಯದೊಳಗಿನ ಬದಲಾವಣೆಗಳಿಗೂ ಆದ್ಯತೆ ನೀಡಬೇಕು. ವಿಶೇಷವಾಗಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಸಮಾನತೆಯ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಹೇಳಿದರು.

ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ:

ಸಮಾವೇಶದ ಪ್ರಾಸ್ತಾವಿಕ ಮಾತುಗಳನ್ನಾಡಿದ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಮುಹಮ್ಮದ್ ಯಾಸೀನ್ ಮಲ್ಪೆ, ದೇಶದ ಒಳಿತು ಎಲ್ಲರ ಒಳಿತಾಗಿದೆ; ದೇಶದ ವಿನಾಶ ಎಲ್ಲರಿಗೂ ಹಾನಿಕಾರಕವಾಗಿದೆ. ವಿವಿಧ ಧರ್ಮಗಳು ಮತ್ತು ಸಂಸ್ಕೃತಿಗಳಿಂದ ಕೂಡಿರುವ ವೈವಿಧ್ಯತೆಯೇ ಭಾರತದ ಬುನಾದಿಯಾಗಿದೆ. ಈ ಬುನಾದಿ ಗಟ್ಟಿಯಾಗಿದ್ದರೆ ದೇಶವೂ ಬಲವಾಗಿರುತ್ತದೆ. ಪ್ರಜಾಪ್ರಭುತ್ವದ ಮೌಲ್ಯಗಳು ದುರ್ಬಲಗೊಂಡರೆ ದೇಶದ ಅಡಿಪಾಯವೇ ದುರ್ಬಲವಾಗುತ್ತದೆ ಎಂದು ಹೇಳಿದರು.
ದೇಶದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸುವುದು ಮತ್ತು ಅವುಗಳನ್ನು ನಾಶಗೊಳಿಸುವ ಪ್ರಯತ್ನಗಳ ವಿರುದ್ಧ ಜನಜಾಗೃತಿ ಮೂಡಿಸುವುದು ದೇಶವನ್ನು ಪ್ರೀತಿಸುವ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಕೆಲವು ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಜನರ ನಡುವೆ ದ್ವೇಷ ಮತ್ತು ಒಡಕು ಮೂಡಿಸಿವೆ. ಇದರಿಂದ ಒಂದೇ ಪರಿಸರದಲ್ಲಿ ವಾಸಿಸುವ ಜನರು ಪರಸ್ಪರ ಸ್ನೇಹ ಸಂಬಂಧ ಬೆಳೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಜನರ ನಡುವೆ ದ್ವೇಷ ಮತ್ತು ಅಪನಂಬಿಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ ದೇಶದ ಸಂಪನ್ಮೂಲಗಳ ಮಾರಾಟ, ಭ್ರಷ್ಟಾಚಾರ, ಆರ್ಥಿಕತೆಯ ಕುಸಿತ ಹಾಗೂ ಪ್ರಜಾಪ್ರಭುತ್ವದ ಸ್ತಂಭಗಳ ದುರ್ಬಲೀಕರಣದಂತಹ ವಿಚಾರಗಳು ಜನರ ಗಮನಕ್ಕೆ ಬಾರದಂತಾಗಿವೆ ಎಂದು ಅವರು ಆರೋಪಿಸಿದರು.

ಮೂವರಿಗೆ ಪ್ರಶಸ್ತಿ ಪ್ರದಾನ:

ಸಮಾರಂಭದಲ್ಲಿ ನಟ ಪ್ರಕಾಶ್ ರಾಜ್ ಅವರಿಗೆ ‘ಮಾನವ ರತ್ನ’, ದುಬೈ ಉದ್ಯಮಿ ಹಿದಾಯತುಲ್ಲಾ ಅಬ್ಬಾಸ್ ಅವರಿಗೆ ‘ಸೇವಾ ರತ್ನ’ ಹಾಗೂ ಬರಹಗಾರ ಮತ್ತು ಸಾಮಾಜಿಕ ಹೋರಾಟಗಾರ ಸುರೇಶ್ ಭಟ್ ಬಾಕ್ರಬೈಲ್ ಅವರಿಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮೂವರಿಗೂ ತಲಾ ₹50,000 ನಗದು ಪುರಸ್ಕಾರ ನೀಡಲಾಯಿತು.
ಪ್ರಕಾಶ್ ರಾಜ್ ಅವರು ತಮ್ಮ ನಗದು ಪುರಸ್ಕಾರವನ್ನು ಎಸ್‌ಐಆರ್ ಹೋರಾಟಕ್ಕಾಗಿ ಸಾಮಾಜಿಕ ಹೋರಾಟಗಾರ ಕೆ.ಎಲ್. ಅಶೋಕ್ ಅವರಿಗೆ ಹಸ್ತಾಂತರಿಸಿದರು. ಹಿದಾಯತುಲ್ಲಾ ಅಬ್ಬಾಸ್ ಅವರು ಹೂಡೆಯ ಸರ್ಕಾರಿ ಶಾಲೆಯ ಉದ್ದೇಶಕ್ಕಾಗಿ ಉಸ್ತಾದ್ ಸಾದಿಕ್ ಅವರಿಗೆ ನಗದು ಪುರಸ್ಕಾರ ನೀಡಿದರು. ಸುರೇಶ್ ಭಟ್ ಅವರು ಹಿಂದಿರುಗಿಸಿದ ನಗದನ್ನು ಒಕ್ಕೂಟದ ಅಧ್ಯಕ್ಷರು ಎಸ್‌ಐಆರ್ ಹೋರಾಟಕ್ಕಾಗಿ ಕೆ.ಎಲ್. ಅಶೋಕ್ ಅವರಿಗೆ ಹಸ್ತಾಂತರಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಮಾಜಿಕ ಕಾರ್ಯಕರ್ತರಾದ ಇಬ್ರಾಹಿಂ ಸಾಹೇಬ್ ಹಂಗಾರಕಟ್ಟೆ, ಬಿಪಿನ್ ಚಂದ್ರಪಾಲ್ ಕಾರ್ಕಳ, ಜೆರಾಲ್ಡ್ ಪಿಂಟೋ ಉಡುಪಿ, ಚಂದ್ರಶೇಖರ್ ಶೆಟ್ಟಿ ಕುಂದಾಪುರ, ಸಾಮಾಜಿಕ ಹೋರಾಟಗಾರ್ತಿ ಗೀತಾ ಸುರೇಶ್ ಕುಮಾರ್ ಬೈಂದೂರು ಹಾಗೂ ಲೇಖಕಿ ಫಾತಿಮಾ ರಲಿಯಾ ಹೆಜಮಾಡಿ ಅವರನ್ನು ಸನ್ಮಾನಿಸಲಾಯಿತು.

ಗಣ್ಯರ ಉಪಸ್ಥಿತಿ

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೌಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಮುಸ್ಲಿಮ್ ಒಕ್ಕೂಟದ ಸಂಚಾಲಕ ಮುಹಮ್ಮದ್ ಯಾಸೀನ್ ಮಲ್ಪೆ ಆಶಯ ಮತ್ತು ಅಭಿನಂದನಾ ಭಾಷಣ ಮಾಡಿದರು.
ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಉಡುಪಿ ಜಿಲ್ಲಾ ವೆಲ್ಫೇರ್ ಫೋರಮ್ ಯುಎಇಯ ಎಂ.ಇ. ಮುಳೂರು, ಉದ್ಯಮಿ ಕರುಣಾಕರ ಶೆಟ್ಟಿ, ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಗೌರವಾಧ್ಯಕ್ಷ ದಿವಾಕರ ಸನಿಲ್, ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು, ಉಡುಪಿ ಸಹಬಾಳ್ವೆ ಸಂಚಾಲಕ ಪ್ರೊ. ಫಣಿರಾಜ್, ಸಾಮಾಜಿಕ ಹೋರಾಟಗಾರ ಕೆ.ಎಲ್. ಅಶೋಕ್, ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಆಸೀಫ್ ಕೋಟೇಶ್ವರ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾರ್ಗ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಕೆ. ಅಶ್ರಫ್, ತೀರ್ಥಹಳ್ಳಿ ಮುಸ್ಲಿಂ ಒಕ್ಕೂಟದ ಹಾಜಿ ಸುಲೈಮಾನ್ ಸಾಹೇಬ್ ಹಾಗೂ ನಾರ್ತ್ ಕೆನರಾ ಮುಸ್ಲಿಂ ಯುನೈಟೆಡ್ ಫೋರಂನ ಇಮ್ತಿಯಾಝ್ ಅಹ್ಮದ್ ಉರ್ಮ ಶೇಖ್ ಉಪಸ್ಥಿತರಿದ್ದರು.

ಒಕ್ಕೂಟದ ಹಿರಿಯ ಉಪಾಧ್ಯಕ್ಷ ಮುಹಮ್ಮದ್, ಮಾಜಿ ಅಧ್ಯಕ್ಷರಾದ ಅಷ್ಪಕ್ ಅಹಮದ್ ಕಾರ್ಕಳ ಮತ್ತು ಇಬ್ರಾಹಿಂ ಸಾಹೇಬ್ ಕೋಟ, ತಾಲೂಕು ಅಧ್ಯಕ್ಷರಾದ ಎಸ್.ಎಂ. ಇರ್ಶಾದ್ ನೇರ್ಜಾ, ಎಸ್. ದಸ್ತಗಿರಿ ಕಂಡ್ಲೂರು, ಮುಹಮ್ಮದ್ ಗೌಸ್ ಮಿಯಾರು, ನರ್ಸೀ ಅಹ್ಮದ್, ತಾಜುದ್ದೀನ್ ಇಬ್ರಾಹಿಂ ಹಾಗೂ ಶಮ್ಸ್ ತಬ್ರೇಝ್ ನಾಗೂರು ಭಾಗವಹಿಸಿದ್ದರು.

ರಿಪ್ಯಾಯಿಯ ದಫ್ ತಂಡ ಕೋಟ ಪಡುಕರೆ ಅವರಿಂದ ದಫ್ ಪ್ರದರ್ಶನ ಗೊಂಡಿತು. ಹಾಫಿಝ್ ಅಬ್ದುಲ್ ರಹ್ಮಾನ್ ಅಶ್ರಫ್ ಕುರಾನ್ ಪಠಿಸಿದರು. ಕಾರ್ಯಕ್ರಮದ ಸಂಚಾಲಕ ಮೌಲಾನ ಝಮೀರ್ ಅಹ್ಮದ್ ರಶಾದಿ ಸ್ವಾಗತಿಸಿದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹುಸೈನ್ ಕಟಪಾಡಿ ವಂದಿಸಿದರು. ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.