ಡೈಲಿವಾರ್ತೆ:31/ಅ./2026

ಷಡ್ಯಂತ್ರಗಳಿಗೆ ಜಗ್ಗುವುದಿಲ್ಲ, ಕಾನೂನು ಹೋರಾಟದಲ್ಲಿ ಸತ್ಯಕ್ಕೆ ಜಯ: ಅಜಿತ್ ಕುಮಾರ್ ಶೆಟ್ಟಿ

ಕುಂದಾಪುರ: ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ರಸ್ತೆ ಅಪಘಾತ ಪ್ರಕರಣದಲ್ಲಿ ತಮ್ಮ ವಿರುದ್ಧ ಮಾಡಲಾದ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ತಮ್ಮನ್ನು ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ನಡೆದಿದೆ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ಆರೋಪಿಸಿದ್ದಾರೆ. ಕಾನೂನು ಹೋರಾಟದಲ್ಲಿ ಸತ್ಯಕ್ಕೆ ಜಯ ಸಿಕ್ಕಿದ್ದು, ಷಡ್ಯಂತ್ರಗಳಿಗೆ ಜಗ್ಗದೆ ನ್ಯಾಯದ ಪರವಾಗಿ ಹೋರಾಟ ಮುಂದುವರಿಸುವುದಾಗಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಅಪಘಾತಕ್ಕೆ ಸಂಬಂಧಿಸಿದ ಲಾರಿ ತಮ್ಮ ಹೆಸರಿನಲ್ಲಿ ಇರಲಿಲ್ಲ. ಅದರ ಚಾಲಕ ಕೂಡ ತಮ್ಮ ಪರಿಚಯದವರಲ್ಲ. ಆದರೂ ತಮ್ಮನ್ನು ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ನಡೆದಿರುವುದು ತೀವ್ರ ನೋವುಂಟು ಮಾಡಿದೆ ಎಂದು ಹೇಳಿದ್ದಾರೆ.

ಕಠಿಣ ಸಂದರ್ಭದಲ್ಲಿ ಬೆಂಬಲವಾಗಿ ನಿಂತು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ನ್ಯಾಯ ದೊರಕಿಸಿಕೊಡಲು ಸಹಕರಿಸಿದ ರಾಜ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್, ಮಂಜುನಾಥ್ ಭಂಡಾರಿ, ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಭವ್ಯ, ಸುನಿಲ್ ಬಂಗೇರ, ಅಜೀಜ್ ಹೆಜಮಾಡಿ, ಹಬೀಬ್ ಅಲಿ ಸೇರಿದಂತೆ ಯುವ ನಾಯಕರು ಹಾಗೂ ಜಿಲ್ಲಾ ಅಧ್ಯಕ್ಷರಿಗೆ ಅವರು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ. ಬೈಂದೂರಿನ ಮಾಜಿ ಶಾಸಕ ಸುಕುಮಾರ್ ಶೆಟ್ಟಿ ಅವರ ಬೆಂಬಲವನ್ನೂ ಸ್ಮರಿಸಿರುವ ಅವರು, ಸಂಕಷ್ಟದ ಸಂದರ್ಭದಲ್ಲಿ ನೆರವಾದ ಎಲ್ಲರಿಗೂ ಋಣಿಯಾಗಿರುವುದಾಗಿ ತಿಳಿಸಿದ್ದಾರೆ.

ತಮ್ಮ ಉದ್ಯಮದ ಕುರಿತು ಸ್ಪಷ್ಟನೆ ನೀಡಿರುವ ಅಜಿತ್ ಕುಮಾರ್ ಶೆಟ್ಟಿ, ತಮಗೆ ಸ್ವಂತ ಪಟ್ಟಾ ಜಮೀನಿದ್ದು, ಕಾನೂನುಬದ್ಧ ಲೀಸ್ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಗತ್ಯ ಅನುಮತಿಗಳನ್ನು ಪಡೆದು ಆವೆ ಮಣ್ಣಿನ ವ್ಯಾಪಾರ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಕರಾವಳಿ ಭಾಗದ ಹಂಚಿನ ಕಾರ್ಖಾನೆಗಳಲ್ಲಿ ಸುಮಾರು 8,000 ಕಾರ್ಮಿಕರು ದುಡಿಯುತ್ತಿದ್ದು, ಹಂಚುಗಳ ಉತ್ಪಾದನೆಗೆ ಆವೆ ಮಣ್ಣು ಅತ್ಯಗತ್ಯವಾಗಿದೆ. ಆಶ್ರಯ ಮನೆಗಳು ಸೇರಿದಂತೆ ಸಾಮಾನ್ಯ ಜನರ ವಸತಿ ನಿರ್ಮಾಣಕ್ಕೆ ಅಗತ್ಯವಿರುವ ಹಂಚುಗಳ ಉತ್ಪಾದನೆಯಲ್ಲಿಯೂ ಈ ಮಣ್ಣಿನ ಪಾತ್ರ ಮಹತ್ವದ್ದಾಗಿದೆ. ಈ ಉದ್ಯಮವನ್ನು ಅವಲಂಬಿಸಿರುವ ಸಾವಿರಾರು ಕಾರ್ಮಿಕರು ಹಾಗೂ ಅವರ ಕುಟುಂಬಗಳ ಜೀವನೋಪಾಯವನ್ನು ಗಮನದಲ್ಲಿಟ್ಟುಕೊಂಡು, ಉದ್ಯಮವನ್ನು ಕಾನೂನುಬದ್ಧವಾಗಿಯೇ ಮುಂದುವರಿಸುವುದಾಗಿ ಅವರು ಹೇಳಿದ್ದಾರೆ.

ನನ್ನ ವಿರುದ್ಧ ಎಷ್ಟೇ ಷಡ್ಯಂತ್ರ ರೂಪಿಸಿದರೂ ನಾನು ಜಗ್ಗುವವನಲ್ಲ ಹೆದರಿ ಹಿಂದೆ ಸರಿಯುವವನೂ ಅಲ್ಲ ಸತ್ಯ ಮತ್ತು ನ್ಯಾಯದ ಪರವಾಗಿ ನನ್ನ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಷಡ್ಯಂತ್ರದ ರಾಜಕಾರಣ ಮಾಡುವ ನಾಯಕರಿಗೆ ಕಿವಿಮಾತು ಹೇಳಿರುವ ಅವರು, ಇಂತಹ ಪ್ರಯತ್ನಗಳನ್ನು ಬದಿಗಿಟ್ಟು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹಾಗೂ ಯುವ ನಾಯಕರನ್ನು ಪ್ರೋತ್ಸಾಹಿಸಿ ಬೆಳೆಸುವತ್ತ ಗಮನಹರಿಸಬೇಕು ಎಂದು ಮನವಿ ಮಾಡಿದ್ದಾರೆ.

ಕಳೆದ 15 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಯಿಂದ ದುಡಿಯುತ್ತಿದ್ದು, ಅಧಿಕಾರಕ್ಕಿಂತ ಪಕ್ಷದ ನಿಷ್ಠೆ ಮತ್ತು ಜನಸೇವೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ಆಗಿದ್ದು, ನ್ಯಾಯಾಲಯದ ಮೇಲೆ ತಮಗೆ ಸಂಪೂರ್ಣ ಗೌರವ ಮತ್ತು ನಂಬಿಕೆ ಇದೆ ಎಂದಿರುವ ಅವರು ಷಡ್ಯಂತ್ರಗಳಿಗೆ ಜಗ್ಗುವುದಿಲ್ಲ ಸತ್ಯದ ಹಾದಿಯಿಂದ ಹಿಂದೆ ಸರಿಯುವುದಿಲ್ಲ. ಜನಸೇವೆಯೇ ನನ್ನ ಸಂಕಲ್ಪ ಎಂದು ಅಜಿತ್ ಕುಮಾರ್ ಶೆಟ್ಟಿ ಹೇಳಿದ್ದಾರೆ.