


ಡೈಲಿವಾರ್ತೆ: 01/ನ./2026




ವ್ಯಾಪಾರದಲ್ಲಿ ನಷ್ಟ, ಸಾಲದ ಹೊರೆ ಒಂದೇ ಕುಟುಂಬದ ನಾಲ್ವರ ದುರಂತ ಅಂತ್ಯ: ಪತ್ನಿ, ಇಬ್ಬರು ಮಕ್ಕಳ ಹತ್ಯೆ ಶಂಕೆ!

ರಾಯಚೂರು: ವ್ಯಾಪಾರದಲ್ಲಿ ಉಂಟಾದ ನಷ್ಟ ಹಾಗೂ ಹೆಚ್ಚಾದ ಸಾಲದ ಹೊರೆ ಒಂದೇ ಕುಟುಂಬದ ದುರಂತಕ್ಕೆ ಕಾರಣವಾಗಿರುವ ಶಂಕೆ ವ್ಯಕ್ತವಾಗಿದೆ. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಲೆ ಮಾಡಿರುವ ಅನುಮಾನದ ನಡುವೆ ಮನೆಯ ಯಜಮಾನ ರೈಲ್ವೆ ಹಳಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ರಾಯಚೂರಿನ ಜಲಾಲನಗರದ ರೈತ ಕಾಲೋನಿಯಲ್ಲಿ ನಡೆದಿದೆ.
ಜಲಾಲನಗರದ ರೈತ ಕಾಲೋನಿಯಲ್ಲಿ ವಾಸವಾಗಿದ್ದ ವಿಷ್ಣು ಮಹೇಶ್ (45), ಅವರ ಪತ್ನಿ ಅರುಣ (36), ಮಕ್ಕಳಾದ ಶ್ಲೋಕ (10) ಹಾಗೂ ಖುಷಿ (7) ಮೃತಪಟ್ಟವರು. ವಿಷ್ಣು ಗಂಜ್ನಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದು, ಹೈದರಾಬಾದ್ನಲ್ಲಿಯೂ ವ್ಯಾಪಾರ ನಡೆಸುತ್ತಿದ್ದರು ಎನ್ನಲಾಗಿದೆ. ಆದರೆ, ವ್ಯಾಪಾರದಲ್ಲಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸಾಲದ ಹೊರೆ ಹೆಚ್ಚಾಗಿತ್ತು ಎಂದು ತಿಳಿದುಬಂದಿದೆ.
ಪತ್ನಿ ಹಾಗೂ ಇಬ್ಬರು ಮಕ್ಕಳ ಸಾವಿನ ಹಿಂದೆ ಕೊಲೆ ಶಂಕೆ ವ್ಯಕ್ತವಾಗಿದೆ. ಮೂವರನ್ನೂ ಉಸಿರುಗಟ್ಟಿಸಿ ಕೊಲೆ ಮಾಡಿರಬಹುದು ಎಂಬ ಶಂಕೆಯಿದ್ದು, ರಾತ್ರಿ ತಂದಿದ್ದ ಬಿರಿಯಾನಿಯಲ್ಲಿ ಕ್ರಿಮಿನಾಶಕ ಬೆರೆಸಿ ಅವರಿಗೆ ನೀಡಿರುವ ಸಾಧ್ಯತೆಯ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ, ಸಾವಿಗೆ ನಿಖರವಾದ ಕಾರಣ ಇನ್ನೂ ದೃಢಪಟ್ಟಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಸಾವಿನ ಹಿಂದಿನ ಸತ್ಯಾಂಶ ತಿಳಿಯಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಈ ದುರಂತದ ನಡುವೆ ಕುಟುಂಬದ ಹಿರಿಯ ಮಗ ಬದುಕುಳಿದಿದ್ದಾನೆ. ರಾತ್ರಿ ಬಿರಿಯಾನಿ ಸೇವಿಸದ ಕಾರಣ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ. ಮನೆಯಲ್ಲಿ ತಾಯಿ, ತಮ್ಮ ಹಾಗೂ ತಂಗಿಯ ಮೃತದೇಹಗಳನ್ನು ಕಂಡ ಬಾಲಕ ಆಘಾತಕ್ಕೊಳಗಾಗಿದ್ದಾನೆ.
ಇತ್ತ, ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ವಿಷ್ಣು ಮಹೇಶ್ ತಮ್ಮ ಪರಿಸ್ಥಿತಿಯನ್ನು ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಹಂಚಿಕೊಂಡಿದ್ದರು ಎನ್ನಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆಯ ಬಗ್ಗೆಯೂ ಸ್ನೇಹಿತರೊಂದಿಗೆ ಮಾತನಾಡಿದ್ದರು. ಈ ವೇಳೆ ಸ್ನೇಹಿತರು ಅವರಿಗೆ ಧೈರ್ಯ ತುಂಬಿ, ಆತುರದ ನಿರ್ಧಾರ ಕೈಗೊಳ್ಳದಂತೆ ಬುದ್ಧಿವಾದ ಹೇಳಿದ್ದರು ಎಂದು ತಿಳಿದುಬಂದಿದೆ.
ಘಟನೆಗೂ ಮುನ್ನ ಮನೆಯಿಂದ ಹೊರಟಿದ್ದ ವಿಷ್ಣು, ಪರಿಚಯಸ್ಥರೊಬ್ಬರಿಗೆ ದೂರವಾಣಿ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದರು ಎನ್ನಲಾಗಿದೆ. ಬಳಿಕ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ನಂತರ ರೈಲ್ವೆ ಹಳಿಯಲ್ಲಿ ವಿಷ್ಣು ಅವರ ಮೃತದೇಹ ಪತ್ತೆಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆ ಹಾಗೂ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಪತ್ನಿ ಮತ್ತು ಮಕ್ಕಳ ಸಾವಿನ ನಿಖರ ಕಾರಣ, ಘಟನೆ ನಡೆದಿರುವ ಸಂದರ್ಭ ಹಾಗೂ ಕುಟುಂಬದ ದುರಂತದ ಹಿಂದಿನ ಸಂಪೂರ್ಣ ಹಿನ್ನೆಲೆಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

