ಡೈಲಿವಾರ್ತೆ: 01/ನ./2026

ಕೋಟ: ಎರಡು ದಿನಗಳಿಂದ ನಾಪತ್ತೆಯಾಗಿದ್ದ 80 ವರ್ಷದ ವೃದ್ಧ ಕೆರೆಯಲ್ಲಿ ಶವವಾಗಿ ಪತ್ತೆ

ಕೋಟ: ಎರಡು ದಿನಗಳಿಂದ ನಾಪತ್ತೆಯಾಗಿದ್ದ 80 ವರ್ಷದ ವೃದ್ಧರೊಬ್ಬರು ಕೆರೆಯಲ್ಲಿ ಮೃತದೇಹವಾಗಿ ಪತ್ತೆಯಾಗಿರುವ ಘಟನೆ ಬ್ರಹ್ಮಾವರ ತಾಲೂಕಿನ ಮೂಡಹಡು ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಗಣಪ ಮರಕಾಲ (80) ಎಂದು ಗುರುತಿಸಲಾಗಿದೆ. ಇವರು ಕಳೆದ 10 ವರ್ಷಗಳಿಂದ ಮೂಡಹಡು ಗ್ರಾಮದ ತಮ್ಮ ಮಗಳು ಕವಿತಾ ಅವರ ಮನೆಯಲ್ಲಿ ವಾಸವಾಗಿದ್ದರು.

ಅಕ್ಟೋಬರ್ 28ರಂದು ರಾತ್ರಿ 9 ಗಂಟೆಗೆ ಮನೆಯವರೊಂದಿಗೆ ಊಟ ಮುಗಿಸಿದ ಗಣಪ ಮರಕಾಲ ಅವರು ಬಳಿಕ ಟಿವಿ ವೀಕ್ಷಿಸುತ್ತಿದ್ದರು. ಮರುದಿನ ಅಂದರೆ ಅಕ್ಟೋಬರ್ 29ರ ಬೆಳಗ್ಗೆ 6 ಗಂಟೆಯ ವೇಳೆಗೆ ಅವರು ಮನೆಯಲ್ಲಿ ಕಾಣೆಯಾಗಿರುವುದು ಮನೆಯವರ ಗಮನಕ್ಕೆ ಬಂದಿದೆ. ತಕ್ಷಣವೇ ಮನೆಯ ವಠಾರ, ಸುತ್ತಮುತ್ತಲಿನ ಪ್ರದೇಶಗಳು ಹಾಗೂ ನೆರೆಹೊರೆಯವರು ಮತ್ತು ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಅವರ ಸುಳಿವು ಲಭ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು.
ವೃದ್ಧರಿಗಾಗಿ ಹುಡುಕಾಟ ಮುಂದುವರಿದಿದ್ದ ಸಂದರ್ಭದಲ್ಲಿ ಅಕ್ಟೋಬರ್ 30ರಂದು ಮಧ್ಯಾಹ್ನ ಸುಮಾರು 2 ಗಂಟೆಗೆ ಮೂಡಹಡು ಗ್ರಾಮದ ಹೊಳ್ಕರೆ ಕೆರೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಅಕ್ಟೋಬರ್ 28ರ ರಾತ್ರಿ 9 ಗಂಟೆಯಿಂದ ಅಕ್ಟೋಬರ್ 30ರ ಮಧ್ಯಾಹ್ನ 2 ಗಂಟೆಯ ನಡುವಿನ ಅವಧಿಯಲ್ಲಿ ಆಕಸ್ಮಿಕವಾಗಿ ಅಥವಾ ಇತರ ಯಾವುದಾದರೂ ಕಾರಣದಿಂದ ಕೆರೆಗೆ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

ಘಟನೆಗೆ ಸಂಬಂಧಿಸಿ ಕೋಟ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 46/2026ರಂತೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಕಲಂ 194ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.