


ಡೈಲಿವಾರ್ತೆ: 03/ನ./2026




ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ
ನ.3ರಿಂದ ನ.7ರವರೆಗೆ ನಿಷೇಧಾಜ್ಞೆ ಜಾರಿ: ಧರಣಿ, ಪ್ರತಿಭಟನೆ, ಮೆರವಣಿಗೆಗೆ ತಡೆ

ಉಡುಪಿ: ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ಉದ್ದೇಶದಿಂದ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನವೆಂಬರ್ 3ರಿಂದ ನವೆಂಬರ್ 7ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಪ್ರಸಕ್ತ ವಿದ್ಯಮಾನಗಳನ್ನು ಪರಿಗಣಿಸಿ, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ವರದಿಯನ್ನು ಆಧರಿಸಿ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ–2023ರ ಕಲಂ 163ರಡಿ ಜಿಲ್ಲಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ.
ನವೆಂಬರ್ 3ರ ಬೆಳಿಗ್ಗೆ 6 ಗಂಟೆಯಿಂದ ನವೆಂಬರ್ 7ರ ರಾತ್ರಿ 10 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳನ್ನು ಹೊರತುಪಡಿಸಿ ಯಾವುದೇ ಧರಣಿ, ಪ್ರತಿಭಟನೆ, ಮೆರವಣಿಗೆ ಅಥವಾ ಅನಿರ್ದಿಷ್ಟಾವಧಿ ಮುಷ್ಕರಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ.
ನಿಷೇಧಾಜ್ಞೆ ಜಾರಿಯಲ್ಲಿರುವ ಪ್ರದೇಶದಲ್ಲಿ ಐದಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲ. ಶಸ್ತ್ರಾಸ್ತ್ರಗಳು, ಬಡಿಗೆ, ಬರ್ಚಿ, ಖಡ್ಗ, ಗದೆ, ಬಂದೂಕು, ಚೂರಿ, ಲಾಠಿ, ಡೊಣ್ಣೆ ಸೇರಿದಂತೆ ವ್ಯಕ್ತಿಗಳ ದೇಹಕ್ಕೆ ಹಾನಿ ಉಂಟುಮಾಡಬಲ್ಲ ಯಾವುದೇ ಮಾರಕಾಸ್ತ್ರಗಳನ್ನು ಸಾಗಿಸುವುದು ಹಾಗೂ ಅವುಗಳೊಂದಿಗೆ ಸಾರ್ವಜನಿಕವಾಗಿ ಸಂಚರಿಸುವುದನ್ನು ನಿರ್ಬಂಧಿಸಲಾಗಿದೆ.
ಮೃತದೇಹಗಳು, ಅವುಗಳ ಆಕೃತಿಗಳು ಅಥವಾ ಪ್ರತಿಕೃತಿಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು ಹಾಗೂ ದಹನ ಮಾಡುವುದಕ್ಕೂ ನಿಷೇಧ ಹೇರಲಾಗಿದೆ. ನಿಷೇಧಾಜ್ಞೆಯ ಅವಧಿಯಲ್ಲಿ ಧ್ವನಿವರ್ಧಕಗಳ ಬಳಕೆಗೆ ಅವಕಾಶವಿರುವುದಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗ ಘೋಷಣೆಗಳನ್ನು ಕೂಗುವುದು, ಹಾಡುವುದು, ವಾದ್ಯಗಳನ್ನು ನುಡಿಸುವುದು, ಭಾಷಣ ಅಥವಾ ವ್ಯಾಖ್ಯಾನ ನೀಡುವುದು, ಸನ್ನೆ ಹಾಗೂ ಅಣಕು ಪ್ರದರ್ಶನಗಳ ಮೂಲಕ ಸಾರ್ವಜನಿಕ ಶಾಂತಿ ಮತ್ತು ಸಭ್ಯತೆಗೆ ಧಕ್ಕೆ ತರುವ ಕೃತ್ಯಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ.
ಅಲ್ಲದೆ, ಪ್ರಚೋದನಾತ್ಮಕ ಹಾಗೂ ಉದ್ವೇಗಕಾರಿ ಹಾಡುಗಳನ್ನು ಹಾಡುವುದು, ಕೂಗಾಟ ನಡೆಸುವುದು, ವ್ಯಕ್ತಿಗಳ ತೇಜೋವಧೆ ಮಾಡುವ ಚಿತ್ರಗಳು, ಚಿಹ್ನೆಗಳು ಅಥವಾ ಪ್ರತಿಕೃತಿಗಳನ್ನು ಪ್ರದರ್ಶಿಸುವುದು ಹಾಗೂ ಸಾರ್ವಜನಿಕ ಗಾಂಭೀರ್ಯ, ನೈತಿಕತೆ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ತರುವ ಯಾವುದೇ ಚಟುವಟಿಕೆಗಳಲ್ಲಿ ತೊಡಗುವುದನ್ನು ನಿರ್ಬಂಧಿಸಲಾಗಿದೆ.
ನಿಷೇಧಿತ ಮಾರಕಾಸ್ತ್ರಗಳು, ಸ್ಫೋಟಕ ವಸ್ತುಗಳು, ವಿನಾಶಕಾರಿ ವಸ್ತುಗಳು ಅಥವಾ ಇತರ ಆಕ್ಷೇಪಾರ್ಹ ವಸ್ತುಗಳನ್ನು ಹೊಂದಿರುವುದು ಕಂಡುಬಂದಲ್ಲಿ ಅವುಗಳನ್ನು ವಶಪಡಿಸಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಅಂತಹ ವಸ್ತುಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವುದರ ಜೊತೆಗೆ, ಸಂಬಂಧಪಟ್ಟವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆದಾಗ್ಯೂ, ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಸರ್ಕಾರಿ ಕರ್ತವ್ಯದಲ್ಲಿರುವ ಅಧಿಕಾರಿ ಮತ್ತು ಸಿಬ್ಬಂದಿಗೆ ಈ ಆದೇಶದಿಂದ ವಿನಾಯಿತಿ ನೀಡಲಾಗಿದೆ.
ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರು ನಿಷೇಧಾಜ್ಞೆಯ ನಿಯಮಗಳನ್ನು ಪಾಲಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.

