


ಡೈಲಿವಾರ್ತೆ: 07/ನ./2026




ಜನತಾ ಪಿಯು ಕಾಲೇಜು ಹೆಮ್ಮಾಡಿಯಲ್ಲಿ ಜನತಾ ಆವಿಷ್ಕಾರ 2k26: ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ, ವ್ಯವಹಾರ ಜ್ಞಾನ ಬೆಳೆಸುವುದು ಶಿಕ್ಷಣದ ಭಾಗವಾಗಲಿ: ಆನಂದ ಸಿ. ಕುಂದರ್

ಕುಂದಾಪುರ: ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಜ್ಞಾನದ ಜತೆಗೆ ಮಾನವೀಯ ಮೌಲ್ಯಗಳು ಹಾಗೂ ವ್ಯವಹಾರಿಕ ಕೌಶಲಗಳನ್ನು ಬೆಳೆಸುವ ಶಿಕ್ಷಣ ನೀಡುವುದು ಇಂದಿನ ಅಗತ್ಯವಾಗಿದೆ. ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡ ವಿದ್ಯಾರ್ಥಿ ಭವಿಷ್ಯದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳುವುದರ ಜತೆಗೆ, ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸ್ವಂತ ಉದ್ಯಮ ಆರಂಭಿಸುವ ಮನೋಭಾವವನ್ನೂ ಬೆಳೆಸಿಕೊಳ್ಳಬೇಕು ಎಂದು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್ ಹೇಳಿದರು.

ಹೆಮ್ಮಾಡಿಯ ಜನತಾ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ‘ವಿಜ್ಞಾನ ಜನತಾ ಆವಿಷ್ಕಾರ್–2026’ ವಿಜ್ಞಾನ, ವ್ಯವಹಾರ ಹಾಗೂ ಸಾಂಸ್ಕೃತಿಕ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಐಎಎಸ್, ಐಪಿಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳ ಭಾಗವಹಿಸುವಿಕೆ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಬೇಕು. ವಿದ್ಯಾಭ್ಯಾಸ ಪೂರ್ಣಗೊಳಿಸಿ ಹೊರಬರುವ ವಿದ್ಯಾರ್ಥಿಗಳು ಜೀವನದ ಸವಾಲುಗಳನ್ನು ಎದುರಿಸಲು ಸಿದ್ಧರಾಗಿರಬೇಕು. ಕೇವಲ ಅಂಕ ಗಳಿಸುವುದಕ್ಕೆ ಸೀಮಿತವಾಗದೆ, ಪ್ರಾಯೋಗಿಕ ಜ್ಞಾನ ಹಾಗೂ ವ್ಯವಹಾರ ನಿರ್ವಹಣೆಯ ಅನುಭವವನ್ನೂ ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ವ್ಯವಹಾರದ ಪ್ರಾಯೋಗಿಕ ಅರಿವು ಮೂಡಿಸುವ ಕಾರ್ಯವನ್ನು ಜನತಾ ವಿದ್ಯಾಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದರು.ಹೆಮ್ಮಾಡಿಯಂತಹ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣದ ಜತೆಗೆ ಸುಸಜ್ಜಿತ ವಸತಿ ಸೌಲಭ್ಯವನ್ನೂ ಕಲ್ಪಿಸಿರುವ ಸಂಸ್ಥೆಯ ಪ್ರಾಂಶುಪಾಲ ಗಣೇಶ್ ಮೊಗವೀರ ಅವರ ಪ್ರಯತ್ನ ಅಭಿನಂದನಾರ್ಹ ಎಂದು ಆನಂದ ಸಿ. ಕುಂದರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಂಗವಾಗಿ ಬೈಂದೂರಿನ ಮಾಜಿ ಶಾಸಕ ಹಾಗೂ ಶ್ರೀ ವಿ.ವಿ.ವಿ. ಮಂಡಳಿ ಹೆಮ್ಮಾಡಿಯ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಅವರು ವಿದ್ಯಾರ್ಥಿಗಳು ಸ್ಥಾಪಿಸಿದ್ದ ಮಳಿಗೆಗಳನ್ನು ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಗಣೇಶ್ ಮೊಗವೀರ ಮಾತನಾಡಿ, ಮುಂಬರುವ ದಿನಗಳಲ್ಲಿ ದೇಶದ ಆರ್ಥಿಕ ಪ್ರಗತಿಯಲ್ಲಿ ವಾಣಿಜ್ಯ ಕ್ಷೇತ್ರ ಮಹತ್ವದ ಪಾತ್ರ ವಹಿಸಲಿದೆ. ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಉದ್ದೇಶದಿಂದ ಸಂಸ್ಥೆಯಲ್ಲಿ ವಿವಿಧ ಪ್ರಾಯೋಗಿಕ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸುವುದರ ಜತೆಗೆ ಸಮಾಜ ನಿರ್ಮಾಣದಲ್ಲಿಯೂ ಜವಾಬ್ದಾರಿಯುತ ಪಾತ್ರ ವಹಿಸಬೇಕು ಎಂಬ ಆಶಯದೊಂದಿಗೆ ಸರ್ವಾಂಗೀಣ ಶಿಕ್ಷಣ ನೀಡಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳಲ್ಲಿ ಸ್ವಾವಲಂಬಿ ಬದುಕಿನ ಮನೋಭಾವ, ಉದ್ಯಮಶೀಲತೆ, ಮಾರುಕಟ್ಟೆ ನಿರ್ವಹಣೆ ಹಾಗೂ ವ್ಯವಹಾರ ಕೌಶಲಗಳನ್ನು ಬೆಳೆಸುವ ಉದ್ದೇಶದಿಂದ ಈ ಮೇಳವನ್ನು ಆಯೋಜಿಸಲಾಗಿದೆ. ಇದು ಐದನೇ ವರ್ಷದ ಕಾರ್ಯಕ್ರಮವಾಗಿದ್ದು, ಈ ಬಾರಿ ಸಂಸ್ಥೆಯ ವಿದ್ಯಾರ್ಥಿಗಳು ಸುಮಾರು 150ಕ್ಕೂ ಅಧಿಕ ಮಳಿಗೆಗಳನ್ನು ಸ್ಥಾಪಿಸಿ ಸ್ವತಃ ವ್ಯವಹಾರ ನಡೆಸುವ ಮೂಲಕ ತಮ್ಮ ಪ್ರಾಯೋಗಿಕ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಜಿಲ್ಲೆಯ ಪ್ರಮುಖ ಶೈಕ್ಷಣಿಕ ಉತ್ಸವವಾಗಿ ಈ ಮೇಳ ಗುರುತಿಸಿಕೊಂಡಿದೆ ಎಂದು ತಿಳಿಸಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ವಸತಿ ವ್ಯವಸ್ಥೆ ದೊರೆಯಬೇಕು ಎಂಬ ಉದ್ದೇಶದಿಂದ ಸಂಸ್ಥೆಯಲ್ಲಿ ಅತ್ಯಾಧುನಿಕ ಹಾಸ್ಟೆಲ್ ಸೌಲಭ್ಯ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಬೈಂದೂರು ಮತ್ತು ಕುಂದಾಪುರ ಭಾಗಗಳಲ್ಲಿ ಸಂಸ್ಥೆಯ ಶಾಖೆಗಳನ್ನು ಆರಂಭಿಸುವ ಯೋಜನೆಯೂ ಇದೆ ಎಂದು ಗಣೇಶ್ ಮೊಗವೀರ ಹೇಳಿದರು.

ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ರಕ್ತದ ಆಪತ್ಬಾಂಧವ ಸತೀಶ್ ಸಾಲ್ಯಾನ್ ಮಣಿಪಾಲ, ಜನಸೇವಾ ಟ್ರಸ್ಟ್ ಪ್ರವರ್ತಕ ವಸಂತ ಗಿಳಿಯಾರ್, ಬೈಂದೂರು ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜು ಪೂಜಾರಿ ಶುಭ ಹಾರೈಸಿದರು.
ಶಿಕ್ಷಣ ಸಲಹೆಗಾರ್ತಿ ಚಿತ್ರಾ ಕಾರಂತ್, ಪ್ರೌಢಶಾಲಾ ಮುಖ್ಯಶಿಕ್ಷಕ ಜಗದೀಶ ಶೆಟ್ಟಿ, ರಾಜಾರಾಮ ಗುರುಜಿ ಯಡಮೊಗೆ ಹಾಗೂ ಇಂಗ್ಲಿಷ್ ಮಾಧ್ಯಮ ವಿಭಾಗದ ಮುಖ್ಯಶಿಕ್ಷಕಿ ದೀಪಿಕಾ ಆಚಾರ್ ಉಪಸ್ಥಿತರಿದ್ದರು.

ಉಪಪ್ರಾಂಶುಪಾಲ ರಮೇಶ್ ಪೂಜಾರಿ ಸ್ವಾಗತಿಸಿದರು. ಉದಯ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆ
ಮೇಳದ ಅಂಗವಾಗಿ ಉಡುಪಿ ಜಿಲ್ಲೆಯ ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಸಾಮೂಹಿಕ ನೃತ್ಯ, ಚಿತ್ರಕಲೆ, ರಸಪ್ರಶ್ನೆ, ವಿಜ್ಞಾನ ಮೇಳ ಹಾಗೂ ಕಿರುಪ್ರಹಸನ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆ ಹಾಗೂ ಪ್ರತಿಭೆಯನ್ನು ಪ್ರದರ್ಶಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಕಲಾತಂಡಗಳಿಂದ ಹೋಳಿ ಕುಣಿತ, ಹೌಂದೇರಾಯನ ವಾಲಗ, ಹುಲಿವೇಷದ ಹೆಜ್ಜೆ ಹಾಗೂ ವೈವಿಧ್ಯಮಯ ನೃತ್ಯ ಪ್ರದರ್ಶನಗಳು ಗಮನ ಸೆಳೆದವು. ಅಂತರರಾಷ್ಟ್ರೀಯ ಖ್ಯಾತಿಯ ಜಾದೂಗಾರ ಸತೀಶ್ ಹೆಮ್ಮಾಡಿ ಮತ್ತು ತಂಡದವರಿಂದ ಜಾದೂ ಪ್ರದರ್ಶನ ನಡೆಯಿತು.

ಒಟ್ಟಿನಲ್ಲಿ, ವಿದ್ಯಾರ್ಥಿಗಳೇ ರೂಪಿಸಿದ 150ಕ್ಕೂ ಅಧಿಕ ಮಳಿಗೆಗಳಲ್ಲಿ ನಡೆದ ವ್ಯವಹಾರ ಚಟುವಟಿಕೆಗಳು ಮೇಳದ ಪ್ರಮುಖ ಆಕರ್ಷಣೆಯಾಗಿದ್ದು, ಪಠ್ಯ ಶಿಕ್ಷಣದ ಜತೆಗೆ ಉದ್ಯಮಶೀಲತೆ ಮತ್ತು ಪ್ರಾಯೋಗಿಕ ಜ್ಞಾನಕ್ಕೂ ಆದ್ಯತೆ ನೀಡುವ ಶಿಕ್ಷಣದ ಮಾದರಿಯನ್ನು ಕಾರ್ಯಕ್ರಮ ಪ್ರತಿಬಿಂಬಿಸಿತು

