


ಡೈಲಿವಾರ್ತೆ: 05/ನ./2026




ಮಾಣಿಕ್ಯ ಕ್ರಿಕೆಟರ್ಸ್ ನೀಲಾವರ ಇದರ 20ನೇ ವರ್ಷದ ಸಂಭ್ರಮ

ನೀಲಾವರ: ಮಾಣಿಕ್ಯ ಕ್ರಿಕೆಟರ್ಸ್ ನೀಲಾವರ ಸಂಸ್ಥೆಯ 20ನೇ ವರ್ಷದ ಸಂಭ್ರಮದ ಅಂಗವಾಗಿ ಆಯೋಜಿಸಿರುವ ಮಾಣಿಕ್ಯ ಪ್ರೀಮಿಯರ್ ಲೀಗ್–ವಿಶ್ವಕರ್ಮ ಟ್ರೋಫಿ–2026 ಕ್ರಿಕೆಟ್ ಪಂದ್ಯಾಟಕ್ಕೆ ನೀಲಾವರ ಕ್ರಾಸ್ನ ಹೆಬ್ಬೆಲಸಿನ ಕಟ್ಟೆ ಮೈದಾನದಲ್ಲಿ ಅದ್ಧೂರಿ ಚಾಲನೆ ನೀಡಲಾಯಿತು.

ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ಚೇರ್ಕಾಡಿ ಗ್ರಾಮ ಪಂಚಾಯತ್ನ ನಿಕಟಪೂರ್ವ ಅಧ್ಯಕ್ಷ ನಾರಾಯಣ ನಾಯ್ಕ್, ಪ್ರಸ್ತುತ ಯುವಜನತೆಯಲ್ಲಿ ಕ್ರಿಕೆಟ್ ಕ್ರೀಡೆ ವಿಶೇಷ ಆಕರ್ಷಣೆ ಪಡೆದುಕೊಂಡಿದ್ದು, ಕ್ರೀಡಾಕೂಟಗಳ ಮೂಲಕ ಯುವಕರು ಸಂಘಟಿತರಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಆದರೆ ಕ್ರೀಡಾ ಚಟುವಟಿಕೆಗಳಿಗೆ ಸೀಮಿತವಾಗದೆ, ಸಮಾಜದ ಜವಾಬ್ದಾರಿಯನ್ನೂ ಅರಿತುಕೊಂಡು ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ. ಈ ನಿಟ್ಟಿನಲ್ಲಿ ಮಾಣಿಕ್ಯ ಕ್ರಿಕೆಟರ್ಸ್ ತಂಡವು ಕ್ರೀಡೆಯ ಜತೆಗೆ ಸಮಾಜಮುಖಿ ಕಾರ್ಯಗಳಲ್ಲಿ ಹಾಗೂ ಬಡವರ ನೆರವಿಗೆ ಸ್ಪಂದಿಸುತ್ತಿರುವುದು ಪ್ರಶಂಸನೀಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಣಿಕ್ಯ ಕ್ರಿಕೆಟರ್ಸ್ ನೀಲಾವರ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ಆಚಾರ್ಯ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆರೂರು ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷ ರಾಜೀವ ಕುಲಾಲ್ ಮಾತನಾಡಿ, ಅಗಲಿದ ಕ್ರಿಕೆಟ್ ಸ್ನೇಹಿತ ಪ್ರದೀಪ್ ಆಚಾರ್ಯ ಅವರ ಸ್ಮರಣಾರ್ಥ ಪಂದ್ಯಾಟ ಆಯೋಜಿಸಿರುವುದು ಅರ್ಥಪೂರ್ಣ ಕಾರ್ಯವಾಗಿದೆ.

ಪಂದ್ಯಾಟದಿಂದ ಸಂಗ್ರಹವಾಗುವ ಖರ್ಚು ವೆಚ್ಚಗಳ ನಂತರದ ಉಳಿಕೆ ಮೊತ್ತವನ್ನು ಅವರ ಕುಟುಂಬಕ್ಕೆ ನೀಡಲು ಸಂಸ್ಥೆ ನಿರ್ಧರಿಸಿರುವುದು ಮಾನವೀಯ ಕಾಳಜಿ ಹಾಗೂ ಸ್ನೇಹಪರತೆಗೆ ಉತ್ತಮ ನಿದರ್ಶನವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತೆಂಕನಡಿಯೂರು ವಲಯ ಗರಡಿ ಮಜಲು ಗುರು ಸೇವಾ ಪರಿಷತ್ನ ಗೌರವಾಧ್ಯಕ್ಷ ದಯಾನಂದ ಆಚಾರ್ಯ ಮಾತನಾಡಿ, ವಿಶ್ವಕರ್ಮ ಸಮಾಜದ ಯುವಕರು ಕ್ರೀಡಾ ಚಟುವಟಿಕೆಗಳ ಜತೆಗೆ ಧಾರ್ಮಿಕ, ಸಾಮಾಜಿಕ ಹಾಗೂ ಸಮುದಾಯದ ಅಭಿವೃದ್ಧಿ ಕಾರ್ಯಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಂಘಟನಾತ್ಮಕ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಆರೂರು ಗ್ರಾಮ ಪಂಚಾಯತ್ನ ನಿಕಟಪೂರ್ವ ಅಧ್ಯಕ್ಷ ಗುರುರಾಜರಾವ್ ಆರೂರು, ಬೀಜಾಡಿ ವಿಲಾಶ್ ಮಾರ್ಬಲ್ಸ್ ಮಾಲಕ ರಮೇಶ್ ಆಚಾರ್ಯ ನೇರಂಬಳ್ಳಿ, ಬೆಂಗಳೂರಿನ ಮಾರುತಿ ಫರ್ನಿಚರ್ ಮಾಲಕ ನಾಗರಾಜ ಆಚಾರ್ಯ, ಶ್ರೀರಾಮ್ ರೋಡ್ಲೈನ್ಸ್ ಮಾಲಕ ರಮೇಶ್ ಪೂಜಾರಿ ನೀಲಾವರ ಹಾಗೂ ಚೈತನ್ಯ ಯುವಕ ಮಂಡಲದ ಅಧ್ಯಕ್ಷ ಶ್ಯಾಮರಾಜ್ ಆಚಾರ್ಯ ನೀಲಾವರ ಉಪಸ್ಥಿತರಿದ್ದರು.
ಸೀತಾಲಕ್ಷ್ಮೀ ರಾಜೇಶ್ ಆಚಾರ್ಯ ಪ್ರಾರ್ಥಿಸಿದರು. ಗಣೇಶ್ ಆಚಾರ್ಯ ಸ್ವಾಗತಿಸಿದರು. ರಾಜೇಶ್ ಆಚಾರ್ಯ ವಂದಿಸಿದರು. ಶಿವನಾರಾಯಣ ಕೋಟ ಕಾರ್ಯಕ್ರಮ ನಿರೂಪಿಸಿದರು.

