ಡೈಲಿವಾರ್ತೆ: 06/ನ./2026

ಬೆಂಗಳೂರಿನಲ್ಲಿ ಭೀಕರ ಸಾಮೂಹಿಕ ಹತ್ಯೆ: ಪತ್ನಿ, ಮಗುವೂ ಸೇರಿ ಒಂದೇ ಕುಟುಂಬದ 7 ಮಂದಿಯನ್ನು ಕೊಂದ ಕ್ಯಾಬ್ ಚಾಲಕ!

ಬೆಂಗಳೂರು: ಪತ್ನಿಯೊಂದಿಗಿನ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಸೇರಿದಂತೆ ಆಕೆಯ ಕುಟುಂಬದ ಏಳು ಮಂದಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಆಘಾತಕಾರಿ ಘಟನೆ ಬೆಂಗಳೂರಿನ ಶ್ರೀರಾಂಪುರದಲ್ಲಿ ಬೆಳಕಿಗೆ ಬಂದಿದೆ. ಹತ್ಯೆಯ ಬಳಿಕ ಮೃತದೇಹಗಳನ್ನು ವಿವಿಧ ಅರಣ್ಯ ಪ್ರದೇಶಗಳಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.

ಈ ಕೃತ್ಯ ಎಸಗಿದ ಆರೋಪಿಯನ್ನು ಶ್ರೀರಾಂಪುರ ನಿವಾಸಿ ಶೇಖರ್ ಎಂದು ಗುರುತಿಸಲಾಗಿದೆ. ಖಾಸಗಿ ಕಂಪನಿಯೊಂದರಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಈತ, ಪತ್ನಿಯೊಂದಿಗಿನ ನಿರಂತರ ಜಗಳ ಹಾಗೂ ಕೌಟುಂಬಿಕ ಕಲಹದಿಂದ ಆಕ್ರೋಶಗೊಂಡು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ಆರೋಪಿಯು ತನ್ನ ಪತ್ನಿ, ಅತ್ತೆ, ಪತ್ನಿಯ ಇಬ್ಬರು ಅಣ್ಣಂದಿರು, ಇಬ್ಬರು ಅತ್ತಿಗೆ ಹಾಗೂ ಏಳು ವರ್ಷದ ಮಗುವನ್ನು ಹತ್ಯೆಗೈದಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ರುಬ್ಬುವ ಕಲ್ಲನ್ನು ಬಳಸಿ ಏಳು ಮಂದಿಯನ್ನೂ ಹತ್ಯೆಗೈದ ಬಳಿಕ, ಕೃತ್ಯಕ್ಕೆ ಬಳಸಿದ ಕಲ್ಲನ್ನು ತೊಳೆದು ಇರಿಸಿದ್ದಾನೆ ಎನ್ನಲಾಗಿದೆ. ನಂತರ ತನ್ನ ಕ್ಯಾಬ್‌ನಲ್ಲಿಯೇ ಮೃತದೇಹಗಳನ್ನು ಸಾಗಿಸಿ ನಂದಿಬೆಟ್ಟ ಸೇರಿದಂತೆ ವಿವಿಧ ಅರಣ್ಯ ಪ್ರದೇಶಗಳಲ್ಲಿ ಎಸೆದಿರುವ ಶಂಕೆ ಪೊಲೀಸರಿಂದ ವ್ಯಕ್ತವಾಗಿದೆ.

ಹತ್ಯೆ ಪ್ರಕರಣವನ್ನು ಮರೆಮಾಚುವ ಉದ್ದೇಶದಿಂದ ಆರೋಪಿಯೇ ಶ್ರೀರಾಂಪುರ ಪೊಲೀಸ್ ಠಾಣೆಗೆ ತೆರಳಿ ತನ್ನ ಪತ್ನಿ ಹಾಗೂ ಮನೆಯವರು ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದ ಎನ್ನಲಾಗಿದೆ. ಸುಮಾರು 15 ದಿನಗಳ ಹಿಂದೆ ಕುಟುಂಬದ ಸದಸ್ಯರು ಕಾಣೆಯಾಗಿರುವುದಾಗಿ ಆತ ಪೊಲೀಸರಿಗೆ ಮಾಹಿತಿ ನೀಡಿದ್ದ. ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡಾಗ ಪ್ರಕರಣದ ಭೀಕರ ಸಂಗತಿಗಳು ಬೆಳಕಿಗೆ ಬಂದಿವೆ ಎಂದು ತಿಳಿದುಬಂದಿದೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಉತ್ತರ ವಿಭಾಗದ ಡಿಸಿಪಿ ನ್ಯಾಮೇಗೌಡ, ಕುಟುಂಬದ ಏಳು ಮಂದಿಯನ್ನೂ ಹತ್ಯೆಗೈದಿರುವ ಆರೋಪ ಕೇಳಿಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಾಜಿನಗರ ಮತ್ತು ಶ್ರೀರಾಂಪುರ ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ. ಹತ್ಯೆಗೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಇನ್ನೊಂದೆಡೆ, ಹತ್ಯೆಗೀಡಾದವರ ಮೃತದೇಹಗಳನ್ನು ವಿವಿಧ ಪ್ರದೇಶಗಳಲ್ಲಿ ಎಸೆದಿರುವ ಶಂಕೆಯ ಹಿನ್ನೆಲೆಯಲ್ಲಿ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಪ್ರಕರಣದ ಸಂಪೂರ್ಣ ವಿವರ ಹಾಗೂ ಹತ್ಯೆಯ ಹಿಂದಿನ ಉದ್ದೇಶ ತನಿಖೆಯಿಂದ ಇನ್ನಷ್ಟೇ ಸ್ಪಷ್ಟವಾಗಬೇಕಿದೆ.