


ಡೈಲಿವಾರ್ತೆ: 14/ನ./2026




ಪೊಳಲಿ ಅನಂತು ಶವಯಾತ್ರೆ ವೇಳೆ ನಡೆದ ಗಲಾಟೆ ಪ್ರಕರಣ – 20 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಮಂಗಳೂರು: 2005ರಲ್ಲಿ ಪೊಳಲಿ ಅನಂತು ಎಂಬಾತನ ಹತ್ಯೆಯ ಬಳಿಕ ನಡೆದ ಶವಯಾತ್ರೆಯ ಸಂದರ್ಭದಲ್ಲಿ ಸಂಭವಿಸಿದ್ದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುಮಾರು 20 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮಂಗಳೂರು ಎನ್.ಎಂ.ಪಿ.ಟಿ. ಕಾಲೋನಿಯ 2ನೇ ಅವಿನ್ಯೂ ನಿವಾಸಿ ಮನೋಜ್ ಎಂದು ಗುರುತಿಸಲಾಗಿದೆ.
2005ರಲ್ಲಿ ಕೈಕಂಬದ ಪೊಳಲಿ ದ್ವಾರದ ಬಳಿ ಪೊಳಲಿ ಅನಂತು ಎಂಬಾತನ ಹತ್ಯೆ ನಡೆದಿತ್ತು.
ಈ ಘಟನೆಯ ಬಳಿಕ ನಡೆದ ಶವಮೆರವಣಿಗೆಯ ಸಂದರ್ಭದಲ್ಲಿ ಗಲಾಟೆ ಸಂಭವಿಸಿದ್ದು, ಈ ಸಂಬಂಧ ಮನೋಜ್ ವಿರುದ್ಧ ಬಜಪೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಬಜಪೆ ಠಾಣೆಯ ಅಪರಾಧ ಸಂಖ್ಯೆ 101/2005ರಂತೆ ಕೆ.ಪಿ.ಡಿ.ಎಲ್.ಪಿ. ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಮಂಗಳೂರಿನ 3ನೇ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಸಿ.ಸಿ. ನಂ. 4048/2007ರಂತೆ ವಿಚಾರಣೆ ನಡೆಯುತ್ತಿತ್ತು.
ಇದೇ ರೀತಿ ಬಜಪೆ ಠಾಣೆಯ ಅಪರಾಧ ಸಂಖ್ಯೆ 104/2005ರಂತೆ ಮತ್ತೊಂದು ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದಲ್ಲಿ ಸಿ.ಸಿ. ನಂ. 4049/2007ರಂತೆ ವಿಚಾರಣೆಯಲ್ಲಿತ್ತು.
ಆರೋಪಿ ಮನೋಜ್ 2007ರಲ್ಲಿ ವಿದೇಶಕ್ಕೆ ತೆರಳಿದ್ದ. ಬಳಿಕ ವಿದೇಶದಿಂದ ವಾಪಸಾದರೂ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ನಂತರ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೌಡೂರು ಗ್ರಾಮದ ರಂಗನಪಲ್ಕೆ ಎಂಬಲ್ಲಿ ವಾಸವಾಗಿದ್ದ ಎನ್ನಲಾಗಿದೆ.
ನ್ಯಾಯಾಲಯದ ವಿಚಾರಣೆಗೆ ನಿರಂತರವಾಗಿ ಗೈರುಹಾಜರಾಗಿದ್ದ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಎರಡು ಪ್ರಕರಣಗಳಲ್ಲಿಯೂ ಎಲ್.ಪಿ.ಸಿ. ವಾರಂಟ್ ಜಾರಿಯಾಗಿತ್ತು. ಪ್ರಕರಣ ಸಂಖ್ಯೆ 101/2005ಕ್ಕೆ ಸಂಬಂಧಿಸಿದಂತೆ ಎಲ್.ಪಿ.ಸಿ. ನಂ. 26/2016 ಹಾಗೂ ಪ್ರಕರಣ ಸಂಖ್ಯೆ 104/2005ಕ್ಕೆ ಸಂಬಂಧಿಸಿದಂತೆ ಎಲ್.ಪಿ.ಸಿ. ನಂ. 50/2016ರಂತೆ ವಾರಂಟ್ ಹೊರಡಿಸಲಾಗಿತ್ತು.
ಮಂಗಳೂರು ಉತ್ತರ ವಿಭಾಗದ ಎಸಿಪಿ ಶ್ರೀಕಾಂತ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ನವೆಂಬರ್ 14ರಂದು ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ಮುಂದಿನ ಕಾನೂನು ಕ್ರಮ ಹಾಗೂ ತನಿಖೆಗಾಗಿ ಆರೋಪಿಯನ್ನು ಬಜಪೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

