ಡೈಲಿವಾರ್ತೆ: 17/ನ./2026

ಬ್ರಹ್ಮರಕೂಟ್ಲು ಟೋಲ್ ಗೇಟ್ ವಿರುದ್ಧ ಹಗಲು-ರಾತ್ರಿ ಧರಣಿ ಆರಂಭ: ಜನವಿರೋಧಿ ಟೋಲ್ ತೆರವಿಗೆ ಹೋರಾಟ ತೀವ್ರ – ಬಿ. ರಮಾನಾಥ ರೈ ಎಚ್ಚರಿಕೆ

ಬಂಟ್ವಾಳ: ಬ್ರಹ್ಮರಕೂಟ್ಲುವಿನಲ್ಲಿ ಕಾರ್ಯಾಚರಿಸುತ್ತಿರುವ ಟೋಲ್ ಗೇಟ್ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದ್ದು, ಇದರ ವಿರುದ್ಧ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ನಿರಂತರವಾಗಿ ವಿರೋಧ ವ್ಯಕ್ತಪಡಿಸುತ್ತಿವೆ. ಜನರ ವಿರೋಧದ ನಡುವೆಯೂ ಟೋಲ್ ವಸೂಲಿ ಮುಂದುವರಿಸುತ್ತಿರುವ ಹೆದ್ದಾರಿ ಪ್ರಾಧಿಕಾರದ ಕ್ರಮ ಖಂಡನೀಯ ಎಂದು ಮಾಜಿ ಸಚಿವ ಹಾಗೂ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿಯ ಗೌರವಾಧ್ಯಕ್ಷ ಬಿ. ರಮಾನಾಥ ರೈ ಆರೋಪಿಸಿದರು.

ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿ ಹಾಗೂ ಸಮಾನ ಮನಸ್ಕ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಮಂಗಳವಾರ ಬೆಳಿಗ್ಗೆ ಆರಂಭಗೊಂಡ ಹಗಲು-ರಾತ್ರಿ ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೆರೆ ವಿಮೋಚನಾ ರಸ್ತೆಯಲ್ಲಿ ಟೋಲ್ ಸುಂಕ ವಸೂಲಿ ಮಾಡುವ ಜಗತ್ತಿನ ಏಕೈಕ ಟೋಲ್ ಗೇಟ್ ಬ್ರಹ್ಮರಕೂಟ್ಲುವಿನಲ್ಲಿದೆ ಎಂದು ವ್ಯಂಗ್ಯವಾಡಿದ ಅವರು, ಇಲ್ಲಿ ಸುಂಕ ವಸೂಲಾತಿಗೆ ಅಗತ್ಯವಾದ ಮೂಲಸೌಕರ್ಯ ಹಾಗೂ ಸಮರ್ಪಕ ವ್ಯವಸ್ಥೆಗಳೇ ಇಲ್ಲ. ಕೇಂದ್ರ ಹೆದ್ದಾರಿ ಇಲಾಖೆಯು ನಿಗದಿಪಡಿಸಿರುವ ಟೋಲ್ ಕೇಂದ್ರಗಳ ನಡುವಿನ ಅಂತರದ ನಿಯಮವನ್ನೂ ಪಾಲಿಸಲಾಗುತ್ತಿಲ್ಲ. ಯಾವುದೇ ರೀತಿಯ ಸುಸಜ್ಜಿತ ವ್ಯವಸ್ಥೆಗಳಿಲ್ಲದೆ ಕೇವಲ ಹಣ ವಸೂಲಿ ಮಾಡುವ ಕೇಂದ್ರವಾಗಿ ಇದು ಕಾರ್ಯನಿರ್ವಹಿಸುತ್ತಿದೆ ಎಂದು ದೂರಿದರು.

ಬೆಳ್ತಂಗಡಿ ಹಾಗೂ ಉಪ್ಪಿನಂಗಡಿ ಭಾಗಗಳಿಂದ ಮಂಗಳೂರಿಗೆ ಸಂಚರಿಸುವ ವಾಹನ ಸವಾರರು ಎರಡು ಕಡೆ ಟೋಲ್ ಪಾವತಿಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯ ಹಾಗೂ ದುರ್ನಡತೆ ಮಿತಿಮೀರುತ್ತಿದ್ದು, ಸಾರ್ವಜನಿಕರ ವಿರೋಧದ ನಡುವೆಯೂ ಸಮಸ್ಯೆ ಪರಿಹರಿಸಲು ಮುಂದಾಗದಿರುವುದು ಖಂಡನೀಯ. ಜನರ ತಾಳ್ಮೆಯನ್ನು ಪರೀಕ್ಷಿಸುವ ಕೆಲಸವನ್ನು ಇಲಾಖೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾನೂನು ಮತ್ತು ನಿಯಮಗಳಿಗೆ ಗೌರವ ನೀಡಿ ಹಂತ ಹಂತವಾಗಿ ಹೋರಾಟವನ್ನು ರೂಪಿಸಿಕೊಂಡು ಬಂದಿದ್ದೇವೆ. ಏಕಾಏಕಿ ಅನಿರ್ದಿಷ್ಟಾವಧಿ ಹೋರಾಟಕ್ಕೆ ಇಳಿದಿಲ್ಲ. ಆದರೂ ಹೆದ್ದಾರಿ ಇಲಾಖೆ ತನ್ನ ನಿಲುವನ್ನು ಬದಲಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ರಮಾನಾಥ ರೈ ಎಚ್ಚರಿಕೆ ನೀಡಿದರು.

ಯುವ ಕಾಂಗ್ರೆಸ್‌ನ ಮಾಜಿ ಜಿಲ್ಲಾಧ್ಯಕ್ಷ ಮಿಥುನ್ ರೈ ಮಾತನಾಡಿ, ಬ್ರಹ್ಮರಕೂಟ್ಲು ಟೋಲ್ ಗೇಟ್ ಯಾವಾಗ ಆರಂಭವಾಯಿತು ಎಂಬುದಕ್ಕಿಂತ ಉಪ್ಪಿನಂಗಡಿ–ವಳಾಲು ಪ್ರದೇಶದಲ್ಲಿ ಟೋಲ್ ವಸೂಲಿ ಆರಂಭವಾಗುವ ದಿನ ಹೆಚ್ಚು ಮಹತ್ವದ್ದಾಗಿದೆ. ಅಂದು ಬ್ರಹ್ಮರಕೂಟ್ಲು ಟೋಲ್ ಗೇಟ್‌ನ ಅಸ್ತಿತ್ವವೇ ಅಂತ್ಯಗೊಳ್ಳಲಿದೆ. ಈ ವಿಚಾರದಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.
ರಾಜ್ಯ ರೈತ ಸಂಘದ ರೂಪೇಶ್ ಮಾತನಾಡಿ, ಟೋಲ್ ಸುಂಕ ಪಾವತಿಸದೆ ಅಸಹಕಾರ ಚಳವಳಿಯ ಮೂಲಕ ಜನರು ತಮ್ಮ ವಿರೋಧವನ್ನು ವ್ಯಕ್ತಪಡಿಸಬೇಕು ಎಂದು ಕರೆ ನೀಡಿದರು.

ಧರಣಿಯ ಅಧ್ಯಕ್ಷತೆಯನ್ನು ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿಯ ಸಂಚಾಲಕ ಮೋಹನ್ ಶೆಟ್ಟಿ ಪಂಜಿಕಲ್ಲು ವಹಿಸಿದ್ದರು. ಮಮತಾ ಗಟ್ಟಿ, ಶಾಲೆಟ್ ಪಿಂಟೋ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಅಶ್ವಿನಿ ಕುಮಾರ್ ರೈ, ಅಬ್ಬಾಸ್ ಅಲಿ, ಉಷಾ ಅಂಚನ್ ಹಾಗೂ ಭಾರತಿ ಪ್ರಶಾಂತ್ ಸೇರಿದಂತೆ ಪ್ರಮುಖರು ಮಾತನಾಡಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಪಿಯೂಷ್ ಎಲ್. ರೋಡ್ರಿಗಸ್, ಜಯಶೀಲ ಅಡ್ಯಂತಾಯ, ಮೋಹನ್ ಕೋಟ್ಯಾನ್, ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಪದ್ಮನಾಭ ರೈ, ಲುಕ್ಮಾನ್ ಬಂಟ್ವಾಳ, ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಸುಧಾಕರ ಶೆಣೈ ಖಂಡಿಗ, ಸುರೇಶ್ ಕುಮಾರ್ ನಾವೂರ, ಉಮೇಶ್ ಬೋಳಂತೂರು, ಎ.ಬಿ. ಅಬ್ದುಲ್ಲ, ಪದ್ಮಶೇಖರ ಜೈನ್, ಮಾಯಿಲಪ್ಪ ಸಾಲ್ಯಾನ್, ಸುದರ್ಶನ ಜೈನ್, ಪದ್ಮನಾಭ ಪೂಜಾರಿ, ದಿವಾಕರ ಪಂಬದಬೆಟ್ಟು, ಐಡಾ ಸುರೇಶ್, ಜಯಂತಿ ಪೂಜಾರಿ, ಚಿತ್ತರಂಜನ್ ಶೆಟ್ಟಿ, ಸದಾಶಿವ ಬಂಗೇರ, ಮುಹಮ್ಮದ್ ನಂದಾವರ, ವೆಂಕಪ್ಪ ಪೂಜಾರಿ, ಸಿದ್ದೀಕ್ ಸರವು, ಸಿರಾಜ್ ಮದಕ, ಯೂಸುಫ್ ಕರಂದಾಡಿ, ಲವೀನಾ ವಿಲ್ಮಾ ಮೊರಾಸ್, ಇಕ್ಬಾಲ್ ಜೆಟಿಟಿ ಹಾಗೂ ಜೋಸ್ಮಿನ್ ಡಿಸೋಜ ಉಪಸ್ಥಿತರಿದ್ದರು.

ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿಯ ಕಾರ್ಯದರ್ಶಿ ಸುರೇಶ್ ಕುಮಾರ್ ಸ್ವಾಗತಿಸಿದರು. ಸಮಿತಿಯ ಸಂಚಾಲಕ ಬಿ. ಶೇಖರ್ ಕಾರ್ಯಕ್ರಮ ನಿರೂಪಿಸಿದರು.