ಡೈಲಿವಾರ್ತೆ: 17/ನ./2026

ಮಣಿಪಾಲ: ಕರ್ಕಶ ಶಬ್ದ, ಪ್ರಖರ ಬೆಳಕಿನೊಂದಿಗೆ ಅಜಾಗರೂಕ ಚಾಲನೆ – ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲು

ಮಣಿಪಾಲ: ವಾಹನದ ಸೈಲೆನ್ಸರ್ ಬದಲಾಯಿಸಿ ಅತಿಯಾದ ಕರ್ಕಶ ಶಬ್ದ ಹಾಗೂ ಕಣ್ಣು ಕುಕ್ಕುವ ಪ್ರಖರ ಬೆಳಕಿನೊಂದಿಗೆ ಸಾರ್ವಜನಿಕ ರಸ್ತೆಯಲ್ಲಿ ಅಜಾಗರೂಕತೆಯಿಂದ ಕಾರು ಚಲಾಯಿಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದ್ದ ಕಾರು ಚಾಲಕನ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣಿಪಾಲ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ಗಣೇಶ ದೇವಾಡಿಗ ಅವರು ನ.17ರಂದು ಠಾಣೆಯ ಸಾಮಾಜಿಕ ಜಾಲತಾಣಗಳ ಮೇಲ್ವಿಚಾರಣೆ ನಡೆಸುತ್ತಿದ್ದ ವೇಳೆ ಮಧ್ಯಾಹ್ನ 12:30ರ ಸುಮಾರಿಗೆ KA-19-MK-8393 ನೋಂದಣಿ ಸಂಖ್ಯೆಯ ಬಿಳಿ ಬಣ್ಣದ ಕಾರಿನ ಚಾಲನೆಯ ಕುರಿತಾದ ಪೋಸ್ಟ್ ಗಮನಕ್ಕೆ ಬಂದಿದೆ.

ಪೋಸ್ಟ್‌ನಲ್ಲಿದ್ದ ಮಾಹಿತಿಯಂತೆ, ಕಾರಿನ ಚಾಲಕ ವಾಹನದ ಮೂಲ ಸೈಲೆನ್ಸರ್ ಬದಲಾಯಿಸಿ ಅತಿಯಾದ ಕರ್ಕಶ ಶಬ್ದ ಉಂಟುಮಾಡುವ ರೀತಿಯಲ್ಲಿ ಕಾರು ಚಲಾಯಿಸುತ್ತಿದ್ದ. ಅಲ್ಲದೆ, ಅತಿವೇಗ ಹಾಗೂ ಅಜಾಗರೂಕ ಚಾಲನೆಯೊಂದಿಗೆ ಪ್ರಖರ ಬೆಳಕಿನ ಬಳಕೆಯಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ಎನ್ನಲಾಗಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿದಾಗ, ಸದರಿ ಕಾರನ್ನು ಪ್ರತಿದಿನ ಇದೇ ರೀತಿಯಲ್ಲಿ ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷ್ಯದಿಂದ ಚಲಾಯಿಸಿ ಸಾರ್ವಜನಿಕರಿಗೆ ಉಪಟಳ ಉಂಟುಮಾಡುತ್ತಿರುವುದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 186/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 281, 292 ಹಾಗೂ ಮೋಟಾರು ವಾಹನ ಕಾಯ್ದೆಯ ಕಲಂ 190(2)ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ