ಡೈಲಿವಾರ್ತೆ: 21/ನ./2026

ಹಿಂದೂ ಸಂಘಟನೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಪ್ರದೀಪ್ ಸಂಗಮ್: ಶಾಸಕ ಕಿರಣ್ ಕುಮಾರ್ ಕೊಡ್ಗಿ

ಕುಂದಾಪುರ: ಹಿಂದೂ ಸಂಘಟನೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಸಂಘಟನೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ದಿಟ್ಟ ಹೋರಾಟಗಾರರಾಗಿದ್ದ ದಿ. ಪ್ರದೀಪ್ ಸಂಗಮ್ ಅವರ ಸೇವೆ, ತ್ಯಾಗ ಮತ್ತು ಹೋರಾಟ ಸದಾ ಸ್ಮರಣೀಯ ಎಂದು ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ನವೆಂಬರ್ 20ರಂದು ಶುಕ್ರವಾರ ಕುಂದಾಪುರದ ಬ್ರಹ್ಮಶ್ರೀ ನಾರಾಯಣಗುರು ಕಲ್ಯಾಣ ಮಂಟಪದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಸಂಗಮ್ ಫ್ರೆಂಡ್ಸ್ ಹಾಗೂ ಸಮಸ್ತ ಹಿಂದೂ ಬಾಂಧವರ ನೇತೃತ್ವದಲ್ಲಿ ಆಯೋಜಿಸಲಾದ ದಿ. ಪ್ರದೀಪ್ ಸಂಗಮ್ ಅವರ ಶ್ರದ್ಧಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರದೀಪ್ ಸಂಗಮ್ ಅವರು ಹಿಂದೂ ಸಂಘಟನೆಯ ಕಾರ್ಯಚಟುವಟಿಕೆಗಳಲ್ಲಿ ತೋರಿದ ನಿಷ್ಠೆ, ಬದ್ಧತೆ ಮತ್ತು ಸಮರ್ಪಣಾ ಮನೋಭಾವ ಅವರ ವ್ಯಕ್ತಿತ್ವದ ವಿಶೇಷತೆಯಾಗಿತ್ತು. ಸಂಘಟನೆಗಾಗಿ ಅವರು ನಡೆಸಿದ ಹೋರಾಟ ಮತ್ತು ಸಲ್ಲಿಸಿದ ಸೇವೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಶಾಸಕ ಕೊಡ್ಗಿ ಸ್ಮರಿಸಿದರು.

ಬಜರಂಗದಳದ ಜಿಲ್ಲಾ ಸಂಚಾಲಕ ಸುನೀಲ್ ಕೆ.ಆರ್. ಮಾತನಾಡಿ, ಪ್ರದೀಪ್ ಸಂಗಮ್ ಅವರ ಹೋರಾಟದ ಮನೋಭಾವ ಹಾಗೂ ಸಂಘಟನಾ ಚಟುವಟಿಕೆಗಳಲ್ಲಿನ ಸಕ್ರಿಯತೆ ಯುವ ಸಮುದಾಯಕ್ಕೆ ಸದಾ ಪ್ರೇರಣೆಯಾಗಲಿದೆ. ಅವರ ನೆನಪು ಮತ್ತು ಆದರ್ಶಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡಲಿವೆ ಎಂದು ನುಡಿ ನಮನ ಸಲ್ಲಿಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಸುಬ್ರಮಣ್ಯ ಹೊಳ್ಳ ಮಾತನಾಡಿ, ಹಿಂದೂ ಧರ್ಮ ಮತ್ತು ಸಂಘಟನೆಯ ವಿಚಾರದಲ್ಲಿ ಪ್ರದೀಪ್ ಸಂಗಮ್ ತೋರಿದ ನಿಷ್ಠೆ, ಧೈರ್ಯ ಹಾಗೂ ಬದ್ಧತೆ ಅನುಕರಣೀಯ. ಅವರು ಪಾಲಿಸಿಕೊಂಡು ಬಂದ ಆದರ್ಶಗಳನ್ನು ಮುಂದುವರಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದರು.
ಕಾರ್ಯಕ್ರಮದ ವಿಶೇಷವಾಗಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿ ಪ್ರದೀಪ್ ಸಂಗಮ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅವರ ಸಂಘಟನಾ ಸೇವೆ, ಹೋರಾಟ ಮತ್ತು ತ್ಯಾಗವನ್ನು ಸ್ಮರಿಸಿ ನುಡಿ ನಮನ ಅರ್ಪಿಸಿದರು.
ಇದೇ ವೇಳೆ ಹಿಂದೂ ಸಂಘಟನೆಯ ವಿವಿಧ ಮುಖಂಡರು ಹಾಗೂ ಕಾರ್ಯಕರ್ತರು ಪ್ರದೀಪ್ ಸಂಗಮ್ ಅವರೊಂದಿಗಿನ ಒಡನಾಟ ಮತ್ತು ಸಂಘಟನಾ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಸ್ಮರಿಸಿ ಗೌರವ ನಮನ ಸಲ್ಲಿಸಿದರು.

ಕಾರ್ಯಕ್ರಮವನ್ನು ಹಿಂದೂ ಸಂಘಟನೆಯ ಮುಖಂಡ ಶಂಕರ್ ಅಂಕದಕಟ್ಟೆ ನಿರೂಪಿಸಿದರು. ಸುರೇಂದ್ರ ಮಾರ್ಕೋಡ್ ವಂದಿಸಿದರು.
ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಕುಂದಾಪುರ ಬಿಜೆಪಿಯ ಪ್ರಮುಖರು, ವಿವಿಧ ಹಿಂದೂ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.