


ಡೈಲಿವಾರ್ತೆ: 23/ನ./2026




ಬಿಸ್ಲೆರಿ ಕುಡಿಯುವ ನೀರಿನಲ್ಲಿ ಅಪಾಯಕಾರಿ ಅಂಶ ಪತ್ತೆ: ಕಂಪನಿ ವಿರುದ್ಧ ಕಾನೂನು ಕ್ರಮಕ್ಕೆ FSSAI ಅನುಮತಿ

ನವದೆಹಲಿ: ದೇಶದ ಜನಪ್ರಿಯ ಪ್ಯಾಕೇಜ್ಡ್ ಕುಡಿಯುವ ನೀರಿನ ಬ್ರ್ಯಾಂಡ್ಗಳಲ್ಲಿ ಒಂದಾದ ಬಿಸ್ಲೆರಿ ಉತ್ಪನ್ನದ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ. ಬಿಸ್ಲೆರಿ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾದರಿಯಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದ ಬ್ರೋಮೇಟ್ ಹಾಗೂ ಅಪಾಯಕಾರಿ ರಾಸಾಯನಿಕ ಅಂಶಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಅನುಮತಿ ನೀಡಿದೆ.
ಬಿಸ್ಲೆರಿ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ನೀರಿನಲ್ಲಿ ಬ್ರೋಮೇಟ್ ಅಂಶದ ಪ್ರಮಾಣ ನಿಗದಿತ ಸುರಕ್ಷತಾ ಮಿತಿಯನ್ನು ಮೀರಿರುವುದು ಪರೀಕ್ಷಾ ವರದಿಯಲ್ಲಿ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಅಡಿಯಲ್ಲಿ ಉತ್ಪನ್ನವನ್ನು ಅಸುರಕ್ಷಿತ ಎಂದು ವರ್ಗೀಕರಿಸಲಾಗಿದೆ.

ಪ್ರಾಥಮಿಕ ಪರೀಕ್ಷೆಯ ವರದಿಯ ಆಧಾರದ ಮೇಲೆ ಮತ್ತಷ್ಟು ಪರಿಶೀಲನೆ ನಡೆಸಲಾಗಿದ್ದು, ರೆಫರಲ್ ಫುಡ್ ಲ್ಯಾಬೋರೇಟರಿಯಲ್ಲಿಯೂ ಮಾದರಿಯನ್ನು ಪರೀಕ್ಷಿಸಲಾಗಿದೆ.
ಈ ಎರಡನೇ ಹಂತದ ಪರೀಕ್ಷೆಯಲ್ಲೂ ನೀರಿನಲ್ಲಿ ಪಾಲಿನ್ಯೂಕ್ಲಿಯರ್ ಅರೋಮ್ಯಾಟಿಕ್ ಹೈಡ್ರೋಕಾರ್ಬನ್ಸ್ (PAHs) ಪತ್ತೆಯಾಗಿರುವುದಾಗಿ ವರದಿಯಾಗಿದೆ.
ಎರಡೂ ಪ್ರಯೋಗಾಲಯಗಳ ಪರೀಕ್ಷಾ ಫಲಿತಾಂಶಗಳು ಉತ್ಪನ್ನದ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿವೆ.
ಆಹಾರ ಸುರಕ್ಷತಾ ಮಾನದಂಡಗಳ ಉಲ್ಲಂಘನೆ ಮತ್ತು ಉತ್ಪನ್ನವನ್ನು ಅಸುರಕ್ಷಿತ ಎಂದು ಪರಿಗಣಿಸಿರುವ ಹಿನ್ನೆಲೆಯಲ್ಲಿ, ಬಿಸ್ಲೆರಿ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಅಡಿಯಲ್ಲಿ ಪ್ರಾಸಿಕ್ಯೂಷನ್ಗೆ FSSAI ಅನುಮೋದನೆ ನೀಡಿದೆ.
ಈ ಬೆಳವಣಿಗೆಯು ಪ್ಯಾಕೇಜ್ಡ್ ಕುಡಿಯುವ ನೀರಿನ ಗುಣಮಟ್ಟ ಮತ್ತು ಗ್ರಾಹಕರ ಆರೋಗ್ಯದ ಸುರಕ್ಷತೆ ಕುರಿತು ಮಹತ್ವದ ಚರ್ಚೆಗೆ ಕಾರಣವಾಗಿದೆ.

