


ಡೈಲಿವಾರ್ತೆ: 21/ನ./2026




ಅಜೆಕಾರು: ಮರಕ್ಕೆ ಡಿಕ್ಕಿಯಾದ ಗೂಡ್ಸ್ ವಾಹನ!ಚಾಲಕ ಸ್ಥಳದಲ್ಲೇ ಮೃತ್ಯು, ಐವರು ಮಹಿಳಾ ಕಾರ್ಮಿಕರಿಗೆ ಗಾಯ

ಉಡುಪಿ: ಕಾರ್ಕಳ ತಾಲೂಕಿನ ಅಜೆಕಾರು ಸಮೀಪದ ಅಂಡಾರು ಕೊಂದಲ್ಕೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನವೊಂದು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ವಾಹನದಲ್ಲಿದ್ದ ಐವರು ಮಹಿಳಾ ಕಾರ್ಮಿಕರು ಗಾಯಗೊಂಡ ಘಟನೆ ಸಂಭವಿಸಿದೆ.
ಮೃತರನ್ನು ಸೀತಾರಾಮ ರೈ (60) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡ ಮಹಿಳಾ ಕಾರ್ಮಿಕರಾದ ವಸಂತಿ, ಲೀಲಾವತಿ, ಶಾಲಿನಿ, ಶೋಭಾ ಮತ್ತು ಪ್ರೇಮ ಅವರನ್ನು ತಕ್ಷಣ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಕಡ್ತಲದ ಹಪ್ಪನಡ್ಕದ ಸದಾನಂದ ಶೆಟ್ಟಿ ಅವರ ಅಡಿಕೆ ತೋಟದ ಕೆಲಸಕ್ಕಾಗಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಗೂಡ್ಸ್ ವಾಹನವು ಅಂಡಾರಿನಿಂದ ಕಾಡುಹೊಳೆ ಮಾರ್ಗವಾಗಿ ಸಂಚರಿಸುತ್ತಿತ್ತು. ಈ ವೇಳೆ ಅಂಡಾರು ಕೊಂದಲ್ಕೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ವಾಹನ ರಸ್ತೆ ಬದಿಯ ಮರಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಚಾಲಕ ಸೀತಾರಾಮ ರೈ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಚಾಲನೆ ಮಾಡುತ್ತಿದ್ದ ಸಂದರ್ಭದಲ್ಲಿ ಸೀತಾರಾಮ ರೈ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿ, ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡಿರಬಹುದೆಂದು ಶಂಕಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

