


ಡೈಲಿವಾರ್ತೆ: 22/ನ./2026




ಕಾಪು ಬೀಚ್ನಲ್ಲಿ ದುರಂತ: ಸಮುದ್ರದ ಅಲೆಗಳಿಗೆ ಸಿಲುಕಿ ಇಬ್ಬರು ಬಾಲಕರು ನಾಪತ್ತೆ, ಓರ್ವನ ರಕ್ಷಣೆ!

ಉಡುಪಿ: ಪ್ರವಾಸಕ್ಕೆಂದು ಕಾಪು ಬೀಚ್ಗೆ ಆಗಮಿಸಿದ್ದ ಕುಟುಂಬದ ಮೂವರು ಮಕ್ಕಳು ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ಮುಳುಗಲಾರಂಭಿಸಿದ ಘಟನೆ ನ.22ರ ಸಂಜೆ ಸಂಭವಿಸಿದೆ.
ಈ ವೇಳೆ ಸ್ಥಳೀಯರು ಹಾಗೂ ಲೈಫ್ಗಾರ್ಡ್ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಓರ್ವನನ್ನು ರಕ್ಷಿಸಿದ್ದು, ಮತ್ತಿಬ್ಬರು ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ.

ದಾವಣಗೆರೆಯ ಜಿಯಾವುಲ್ಲ ಹಾಗೂ ಅವರ ಸಂಬಂಧಿಕರು ಸೇರಿದಂತೆ ಸುಮಾರು 10ರಿಂದ 12 ಕುಟುಂಬಗಳ ಸದಸ್ಯರು ಪ್ರವಾಸದ ನಿಮಿತ್ತ ಕಾಪು ಬೀಚ್ಗೆ ಆಗಮಿಸಿದ್ದರು. ಸಂಜೆ ಸುಮಾರು 4:30ರ ವೇಳೆಗೆ ಕುಟುಂಬದ ಮಕ್ಕಳು ಸಮುದ್ರದಲ್ಲಿ ಆಟವಾಡುತ್ತಿದ್ದಾಗ ಏಕಾಏಕಿ ಅಲೆಗಳ ತೀವ್ರ ಸೆಳೆತಕ್ಕೆ ಸಿಲುಕಿದ್ದಾರೆ. ಈ ವೇಳೆ ಮೊಹಮ್ಮದ್ ಇಸಾಕ್, ಸಮೀರ್ ಭಾಷಾ ಹಾಗೂ ಮಲ್ಲಿಕ್ ರಿಯಾನ್ ಸಮುದ್ರದ ನೀರಿನಲ್ಲಿ ಮುಳುಗಲಾರಂಭಿಸಿದ್ದಾರೆ.
ಘಟನೆಯನ್ನು ಗಮನಿಸಿದ ಸ್ಥಳೀಯರು ಹಾಗೂ ಕರ್ತವ್ಯದಲ್ಲಿದ್ದ ಲೈಫ್ಗಾರ್ಡ್ ಸಿಬ್ಬಂದಿ ತಕ್ಷಣ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಮೊಹಮ್ಮದ್ ಇಸಾಕ್ನನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದು, ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆದರೆ, 20 ವರ್ಷದ ಸಮೀರ್ ಭಾಷಾ ಹಾಗೂ 15 ವರ್ಷದ ಮಲ್ಲಿಕ್ ರಿಯಾನ್ ಅವರ ಪತ್ತೆ ಸಾಧ್ಯವಾಗಿಲ್ಲ. ಇಬ್ಬರೂ ಸಮುದ್ರದಲ್ಲಿ ನಾಪತ್ತೆಯಾಗಿದ್ದು, ಸ್ಥಳೀಯರು ಹಾಗೂ ಲೈಫ್ಗಾರ್ಡ್ ಸಿಬ್ಬಂದಿಯ ಸಹಕಾರದೊಂದಿಗೆ ಶೋಧ ಕಾರ್ಯಾಚರಣೆ ಮುಂದುವರಿದಿದೆ.

