ಡೈಲಿವಾರ್ತೆ: 24/ನ./2026

ಬಂಟ್ವಾಳ: ಎರಡು ಪ್ರತ್ಯೇಕ ಅಬಕಾರಿ ದಾಳಿ – 1,450 ಲೀಟರ್ ಗೋವಾ ಮದ್ಯ ವಶ,
ಮದ್ಯದೊಂದಿಗೆ ಮೂರು ಕಾರುಗಳು ಜಪ್ತಿ: ₹20.37 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಅಬಕಾರಿ ಇಲಾಖೆ ಅಧಿಕಾರಿಗಳು ಮಂಗಳವಾರ ಎರಡು ಪ್ರತ್ಯೇಕ ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ದಾಸ್ತಾನು ಮಾಡಿದ್ದ ಹಾಗೂ ಸಾಗಾಟ ಮಾಡುತ್ತಿದ್ದ ಗೋವಾ ರಾಜ್ಯದ ಒಟ್ಟು 1,450.340 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಮದ್ಯದ ಜತೆಗೆ ಸಾಗಾಟಕ್ಕೆ ಬಳಸಿದ್ದ ಎರಡು ಕಾರುಗಳನ್ನು ಜಪ್ತಿ ಮಾಡಲಾಗಿದ್ದು, ಎರಡೂ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಮದ್ಯ ಹಾಗೂ ವಾಹನಗಳ ಅಂದಾಜು ಒಟ್ಟು ಮೌಲ್ಯ ₹20,37,340 ಎಂದು ಅಬಕಾರಿ ಇಲಾಖೆ ತಿಳಿಸಿದೆ.

ಬಾಳ್ತಿಲದಲ್ಲಿ 1,261 ಲೀಟರ್ ಮದ್ಯ ಪತ್ತೆ:
ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಪೂರ್ಲಿಪಾಡಿ ಎಂಬಲ್ಲಿ ಅಮಿತ್ ಬಿನ್ ಅಣ್ಣು ಪೂಜಾರಿ ಅವರಿಗೆ ಸೇರಿದ ಜಾಗದಲ್ಲಿ ಸಂಪ್ರಿತ್ ಕಾಸರಗೋಡು ಎಂಬಾತನ ಸಹಭಾಗಿತ್ವದಲ್ಲಿ ಗೋವಾ ರಾಜ್ಯದಲ್ಲಿ ತಯಾರಿಸಲಾದ ಮದ್ಯವನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಬಗ್ಗೆ ಅಬಕಾರಿ ಅಧಿಕಾರಿಗಳಿಗೆ ಮಾಹಿತಿ ಲಭಿಸಿತ್ತು.
ಈ ಹಿನ್ನೆಲೆಯಲ್ಲಿ ಬಂಟ್ವಾಳ ವಲಯದ ಅಬಕಾರಿ ನಿರೀಕ್ಷಕ ಲಕ್ಷ್ಮಣ್ ಶಿವಣಗಿ ಅವರ ನೇತೃತ್ವದಲ್ಲಿ ಅಧಿಕಾರಿಗಳು ಸ್ಥಳಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಈ ವೇಳೆ 180 ಮಿಲಿ ಸಾಮರ್ಥ್ಯದ ರಾಯಲ್ ಬ್ಲೂ ಮಾಲ್ಟ್ ವಿಸ್ಕಿಯ 146 ಪೆಟ್ಟಿಗೆಗಳಲ್ಲಿ ಸಂಗ್ರಹಿಸಿಡಲಾಗಿದ್ದ ಒಟ್ಟು 1,261.440 ಲೀಟರ್ ಗೋವಾ ಮದ್ಯ ಪತ್ತೆಯಾಗಿದೆ. ಜಪ್ತಿ ಮಾಡಲಾದ ಮದ್ಯದ ಅಂದಾಜು ಮೌಲ್ಯ ₹7,72,340 ಎಂದು ತಿಳಿದುಬಂದಿದೆ.

ಕಾರ್ಯಾಚರಣೆಯಲ್ಲಿ ಅಬಕಾರಿ ಉಪನಿರೀಕ್ಷಕರಾದ ಅಭಿಷೇಕ್ ಬೋರಕರ, ವಿಶಾಲ್ ನಾಯಕ್, ಅಬಕಾರಿ ಪೇದೆಗಳಾದ ಪ್ರಕಾಶ್, ದೊಡ್ಡಪ್ಪ ಹಾಗೂ ವಾಹನ ಚಾಲಕ ಧೀರಜ್ ಪಾಲ್ಗೊಂಡಿದ್ದರು.

ಎರಡು ಕಾರುಗಳಲ್ಲಿ ಗೋವಾ ಮದ್ಯ ಸಾಗಾಟ:
ಇನ್ನೊಂದು ಪ್ರಕರಣದಲ್ಲಿ ಬಂಟ್ವಾಳದ ಮೆಲ್ಕಾರ್ ಸಮೀಪದ ಕಲ್ಲಡ್ಕ ಪ್ರದೇಶದಲ್ಲಿ ಕೇರಳ ರಾಜ್ಯದ ನೋಂದಣಿ ಹೊಂದಿರುವ ಎರಡು ಕಾರುಗಳಲ್ಲಿ ಯಾವುದೇ ಪರವಾನಗಿ ಅಥವಾ ಅಧಿಕೃತ ದಾಖಲೆಗಳಿಲ್ಲದೆ ಗೋವಾ ಮದ್ಯವನ್ನು ಕೇರಳಕ್ಕೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಅಬಕಾರಿ ಅಧಿಕಾರಿಗಳಿಗೆ ಲಭಿಸಿತ್ತು.

ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಎರಡು ಕಾರುಗಳನ್ನು ತಡೆದು ತಪಾಸಣೆ ನಡೆಸಿದಾಗ, ಕೇರಳ ನೋಂದಣಿಯ ಬಿಳಿ ಮತ್ತು ಕಪ್ಪು ಬಣ್ಣದ ಹುಂಡೈ i20 ಕಾರು ಹಾಗೂ ಬಿಳಿ ಬಣ್ಣದ ಮಾರುತಿ ಸುಜುಕಿ ಸ್ವಿಫ್ಟ್ VDI ಕಾರಿನಲ್ಲಿ ಮದ್ಯ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.
ಆರೋಪಿಗಳಾದ ಚಂದ್ರಶೇಖರ್ (ಅಣ್ಣು), ಸಫ್ಘಾನ್ ಎಂ. ಮತ್ತು ಮಹಮ್ಮದ್ ಶಾಫಿನ್ ಅವರು 180 ಮಿಲಿ ಸಾಮರ್ಥ್ಯದ ರಾಯಲ್ ಬ್ಲೂ ಮದ್ಯದ 24 ಪೆಟ್ಟಿಗೆಗಳಲ್ಲಿ ಒಟ್ಟು 188.9 ಲೀಟರ್ ಗೋವಾ ಮದ್ಯವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.

ಮದ್ಯದೊಂದಿಗೆ ಸಾಗಾಟಕ್ಕೆ ಬಳಸಿದ್ದ ಎರಡೂ ಕಾರುಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಈ ಪ್ರಕರಣದಲ್ಲಿ ವಶಪಡಿಸಿಕೊಂಡ ಮದ್ಯ ಹಾಗೂ ವಾಹನಗಳ ಅಂದಾಜು ಒಟ್ಟು ಮೌಲ್ಯ ₹12,65,000 ಎಂದು ಅಂದಾಜಿಸಲಾಗಿದೆ.
ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 11, 14, 15, 38(ಎ) ಮತ್ತು 40ರ ಉಲ್ಲಂಘನೆಯ ಹಿನ್ನೆಲೆಯಲ್ಲಿ ಕಲಂ 32ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.