



ಡೈಲಿವಾರ್ತೆ: 27/ನ./2026




ಕೋಟ ಕಾರಂತ ಥೀಮ್ ಪಾರ್ಕ್ ಭೂಕಬಳಿಕೆ ಆರೋಪ ಸತ್ಯಕ್ಕೆ ದೂರ: ಸತೀಶ್ ಕುಂದರ್ ಸ್ಪಷ್ಟನೆ
- ಸರ್ಕಾರಿ ಜಾಗದಲ್ಲಿ ಸರ್ಕಾರಿ ಕಟ್ಟಡ ನಿರ್ಮಾಣವಾಗಿರುವಾಗ ಭೂಕಬಳಿಕೆ ಆರೋಪಕ್ಕೆ ಆಧಾರವೇನು? – ತನಿಖೆಗೆ ನಮ್ಮ ಅಭ್ಯಂತರವಿಲ್ಲ

ಕೋಟ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರ ಹೆಸರಿನಲ್ಲಿ ಕೋಟತಟ್ಟಿನಲ್ಲಿ ನಿರ್ಮಿಸಲಾಗಿರುವ ಥೀಮ್ ಪಾರ್ಕ್ನ ಜಾಗಕ್ಕೆ ಸಂಬಂಧಿಸಿದಂತೆ ಕೇಳಿಬಂದಿರುವ ಭೂಕಬಳಿಕೆ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಕಾರಂತರ ಹೆಸರನ್ನು ಅನಗತ್ಯವಾಗಿ ವಿವಾದಕ್ಕೆ ಎಳೆದು ತರುವ ಉದ್ದೇಶದಿಂದ ಇಂತಹ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಕೋಟತಟ್ಟು ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ ಸ್ಪಷ್ಟಪಡಿಸಿದ್ದಾರೆ.
ಡಾ. ಶಿವರಾಮ ಕಾರಂತರು ಕೋಟದ ನೆಲದಲ್ಲಿ ಜನಿಸಿದ ಮಹಾನ್ ಸಾಹಿತಿಯಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು 2010ರಲ್ಲಿ ಪ್ರವಾಸೋದ್ಯಮ ಇಲಾಖೆಯ ಮೂಲಕ ಅನುದಾನ ಬಿಡುಗಡೆಗೊಳಿಸಿ ಥೀಮ್ ಪಾರ್ಕ್ ನಿರ್ಮಿಸಿತ್ತು. ಈ ಯೋಜನೆಯ ಅನುಷ್ಠಾನವು ಅಂದಿನ ಉಡುಪಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದಿತ್ತು ಎಂದು ಅವರು ತಿಳಿಸಿದ್ದಾರೆ.
ಥೀಮ್ ಪಾರ್ಕ್ ನಿರ್ಮಾಣದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕೆರೆಯ ಮೂಲ ವಿಸ್ತೀರ್ಣಕ್ಕೆ ಧಕ್ಕೆಯಾಗದಂತೆ ಅದನ್ನು ಉಳಿಸಿಕೊಂಡು, ಸುತ್ತಲೂ ಕಲ್ಲುಗಳನ್ನು ಕಟ್ಟಿ ಅಭಿವೃದ್ಧಿಪಡಿಸಲಾಗಿತ್ತು. ಕೆರೆಯ ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿ ಥೀಮ್ ಪಾರ್ಕ್ ಕಟ್ಟಡವನ್ನು ನಿರ್ಮಿಸಲಾಗಿತ್ತು. ಈ ಎಲ್ಲ ಬೆಳವಣಿಗೆಗಳನ್ನು ಸ್ಥಳೀಯ ಗ್ರಾಮಸ್ಥರು ಕಣ್ಣಾರೆ ಕಂಡಿದ್ದು, ವಾಸ್ತವ ಸ್ಥಿತಿಯನ್ನು ಅರಿಯದೆ ಭೂಕಬಳಿಕೆಯ ಆರೋಪ ಮಾಡುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರಿ ಸ್ವತ್ತಿನ ಮೇಲೆ ಭೂಕಬಳಿಕೆ ಆರೋಪ ಹೇಗೆ?
ಥೀಮ್ ಪಾರ್ಕ್ ನಿರ್ಮಾಣವಾಗಿರುವ ಜಾಗ ಸರ್ಕಾರಕ್ಕೆ ಸೇರಿದ್ದಾಗಿದ್ದು, ಅಲ್ಲಿ ನಿರ್ಮಿಸಲಾಗಿರುವ ಕಟ್ಟಡವೂ ಸರ್ಕಾರಿ ಸ್ವತ್ತಾಗಿದೆ. ಹೀಗಿರುವಾಗ ಭೂಕಬಳಿಕೆ ನಡೆದಿದೆ ಎಂಬ ಆರೋಪದ ಹಿಂದಿನ ಆಧಾರವೇನು? ಭೂಕಬಳಿಕೆ ಮಾಡಲಾಗಿದೆ ಎನ್ನುವುದಾದರೆ ಅದನ್ನು ಮಾಡಿದವರು ಯಾರು ಎಂಬುದನ್ನು ಆರೋಪ ಮಾಡುತ್ತಿರುವವರು ಸ್ಪಷ್ಟಪಡಿಸಬೇಕು. ಯಾವುದೇ ದಾಖಲೆ ಅಥವಾ ವಾಸ್ತವಾಂಶಗಳ ಪರಿಶೀಲನೆಯಿಲ್ಲದೆ ಸಾರ್ವಜನಿಕವಾಗಿ ಆರೋಪಗಳನ್ನು ಮಾಡುವುದು ಗೊಂದಲ ಸೃಷ್ಟಿಸುವ ಪ್ರಯತ್ನವಾಗಿದೆ ಎಂದು ಸತೀಶ್ ಕುಂದರ್ ಪ್ರಶ್ನಿಸಿದ್ದಾರೆ.
ಗ್ರಾಮ ಪಂಚಾಯತ್ ಮತ್ತು ಕಾರಂತ ಪ್ರತಿಷ್ಠಾನದಿಂದ ನಿರ್ವಹಣೆ
ಥೀಮ್ ಪಾರ್ಕ್ ನಿರ್ಮಾಣ ಪೂರ್ಣಗೊಂಡ ಬಳಿಕ ಅಂದಿನ ಉಡುಪಿ ಜಿಲ್ಲಾಧಿಕಾರಿ ರೇಜು ಅವರು, ಸರ್ಕಾರಿ ಸ್ವತ್ತಾಗಿರುವ ಈ ಪಾರ್ಕ್ನ ನಿರ್ವಹಣೆಯನ್ನು ಕೋಟತಟ್ಟು ಗ್ರಾಮ ಪಂಚಾಯತ್ ಹಾಗೂ ಕಾರಂತ ಪ್ರತಿಷ್ಠಾನ ಜಂಟಿಯಾಗಿ ವಹಿಸಿಕೊಳ್ಳುವಂತೆ ಆದೇಶಿಸಿದ್ದರು. ಜಿಲ್ಲಾಡಳಿತದ ಸೂಚನೆಯಂತೆ ಅಂದಿನಿಂದ ಇಂದಿನವರೆಗೂ ಎರಡೂ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಿರ್ವಹಣಾ ಕಾರ್ಯಗಳು ನಡೆಯುತ್ತಿವೆ ಎಂದು ಅವರು ವಿವರಿಸಿದ್ದಾರೆ.
ಥೀಮ್ ಪಾರ್ಕ್ಗೆ ಸಂಬಂಧಿಸಿದಂತೆ ಸರ್ಕಾರ ಅಥವಾ ಯಾವುದೇ ಅಧಿಕೃತ ಸಂಸ್ಥೆ, ಇಲಾಖೆಯು ತನಿಖೆ ನಡೆಸುವುದಾದರೆ ಅದಕ್ಕೆ ತಮ್ಮ ಸಂಪೂರ್ಣ ಸಹಮತವಿದೆ. ದಾಖಲೆಗಳ ಆಧಾರದಲ್ಲಿ ಸತ್ಯಾಸತ್ಯತೆ ಪರಿಶೀಲನೆಯಾಗಲಿ. ಆದರೆ, ಪ್ರಚಾರದ ಉದ್ದೇಶಕ್ಕಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರ ಹೆಸರನ್ನು ವಿವಾದದ ಕೇಂದ್ರವನ್ನಾಗಿಸಿ ಅಪಪ್ರಚಾರ ನಡೆಸುವುದು ಖಂಡನೀಯ. ಕಾರಂತರ ಗೌರವ ಮತ್ತು ಪ್ರತಿಷ್ಠೆಗೆ ಧಕ್ಕೆ ತರುವ ರೀತಿಯಲ್ಲಿ ಅನಗತ್ಯ ವಿವಾದ ಸೃಷ್ಟಿಸಬಾರದು ಎಂದು ಕೋಟತಟ್ಟು ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ ಮನವಿ ಮಾಡಿದ್ದಾರೆ.

