ಡೈಲಿ ವಾರ್ತೆ : 31 ಮೇ 2022

ಮಂಗಳೂರು: ನಗರದ ಬಿಕರ್ನಕಟ್ಟೆಯಲ್ಲಿ ರವಿವಾರ ನಡೆದ ಅಪಘಾತದ ಗಾಯಾಳು ಧೀರಜ್ ಅವರ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ನಿನ್ನೆ ವೈದ್ಯರು ಪ್ರಕಟಿಸಿದ್ದು, ಇಂದು ಅವರ ಅಂಗಾಂಗ ದಾನ ಪ್ರಕ್ರಿಯೆ ನಡೆಯಲಿದೆ.

ಧೀರಜ್ ಅವರ ಕುಟುಂಬದ ಸಮ್ಮತಿಯ ಮೇರೆಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಪ್ರಕ್ರಿಯೆ ನಡೆಯಲಿದೆ. ಚೆನ್ನೈ ತಂಡ ಖಾಸಗಿ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿ ಅಂಗಾಂಗಗಳನ್ನು ಕೊಂಡೊಯ್ಯಲಿದ್ದಾರೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿದ ಬೈಕ್ ರಸ್ತೆ ಮಧ್ಯದ ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಬಿಕರ್ನಕಟ್ಟೆಯ ಮಸೂದ್ ಎಜ್ಯುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಎದುರುಗಡೆಯ ಉಸ್ಮಾನಿಯಾ ಕಾಂಪ್ಲೆಕ್ಸ್ ಬಳಿ ರವಿವಾರ ಬೆಳಗ್ಗಿನ ಜಾವ ಅಪಘಾತ ನಡೆದಿತ್ತು.

ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಬೈಕ್ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ ಹೊಡೆದಿದೆ. ಈ ವೇಳೆ ಸವಾರರಿಬ್ಬರು ಬೈಕಿನಿಂದ ಡಿವೈಡರ್ ಗೆ ಎಸೆಲಯಲ್ಪಟ್ಟಿರುವುದು ಕಂಡುಬರುತ್ತಿದೆ. ಗಣೇಶ್ ಎಂಬವರು ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಗಣೇಶ್ ಶನಿವಾರ ರಾತ್ರಿ ತನ್ನ ಸ್ನೇಹಿತ ಧೀರಜ್ ರನ್ನು ಅವರ ಮನೆಗೆ ಬಿಟ್ಟು ಬರಲೆಂದು ತನ್ನ ಬೈಕಿನಲ್ಲಿ ಕರೆದೊಯ್ಯುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಈ ಅಪಘಾತ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡು ಡಿವೈಡರ್ ನಲ್ಲಿ ಬಿದ್ದಿದ್ದ ಇವರಿಬ್ಬರನ್ನು ಆ ದಾರಿಯಲ್ಲಿ ಆಟೋ ರಿಕ್ಷಾ ಬಾಡಿಗೆಗೆ ತೆರಳುತ್ತಿದ್ದ ಪ್ರವೀಣ್ ಕುಮಾರ್ ಎಂಬವರು ಗಮನಿಸಿ ಸಾರ್ವಜನಿಕರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿದ್ದರು.

ಈ ಬಗ್ಗೆ ಸಂಚಾರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.