ಡೈಲಿ ವಾರ್ತೆ: 05/ಮೇ /2024

ಕುಂದಾಪ್ರ ಕನ್ನಡ ನಾಲ್ಕನೇಯ ಸಾಹಿತ್ಯ ಸಮ್ಮೇಳನ “ಕಾಂಬ” ಉದ್ಘಾಟನೆ

ಕುಂದಾಪುರ : ಯಾವ್ದೇ ಭಾಷೆಗೂ ಅಲ್ಲಿನ ನೆಲಕ್ಕೂ ಅವಿನಾಭಾವ ಸಂಬಂಧ ಇರತ್ತ್. ನೆಲೆ ತಪ್ಪಿದ್ರೆ ಭಾಷಿ ಸಾಯಿತ್ತ್.. ಪ್ರಪಂಚದ್ ಏಳ್ ಸಾವ್ರ ಭಾಷೆಲ್ ನಾಕ್ ಸಾವ್ರ ಭಾಷಿ ಈಗ್ಲೇ ಮಾಯ ಆಯಿತ್ತ್. ಕೇರಳ ರಾಜ್ಯದ ಒಂದ್ ಬುಡಕಟ್ ಜನಾಂಗದ್ ಮಾದಿಕ ಎಂಬ್ ಭಾಷಿ ಮಾತಾಡುವವರ್ ಈಗ ಇಬ್ರೇ ಇಪ್ಪುದ್. ಅತೀ ಚೆಂದದ್ ವಿಶಿಷ್ಟ ಭಾಷಿಯಾದ್ ಕುಂದಾಪ್ರ ಕನ್ನಡಕ್ಕೂ ಒಂದಿನ ಇದೇ ಗತಿ ಬತ್ತ್. ಆದ್ರಿಂದ ನಾವ್ ಕುಂದಾಪ್ರದವ್ರ್  ನಮ್ ಭಾಷಿನ ಹೆಚ್ ಹೆಚ್ಚ್ ಮಾತಾಡ್ಕ್. ಕುಂದಾಪ್ರ ಕನ್ನಡ್ ದಲ್ಲೇ ಸಾಹಿತ್ಯ ಸಮ್ಮೇಳನ ಮಾಡ್ ತಿಪ್ಪುದ್ ಭಾರೀ ಒಳ್ಳೇದ್… ಎಂದು ಕುಂದಾಪ್ರ ಕನ್ನಡ ನಾಲ್ಕನೆಯ ಸಾಹಿತ್ಯ ಸಮ್ಮೇಳನ “ಕಾಂಬ” ದ ಅಧ್ಯಕ್ಷ, ಹಿರಿಯ ಸಾಹಿತಿ ಎ.ಎಸ್.ಎನ್. ಹೆಬ್ಬಾರ್ ಹೇಳಿದರು. ಅವರು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ ಭಾನುವಾರ ನಡೆದ ಕುಂದಾಪ್ರ ಕನ್ನಡ ನಾಲ್ಕನೆಯ ಸಾಹಿತ್ಯ ಸಮ್ಮೇಳನ “ಕಾಂಬ” ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಹೆತ್ತವರು ತಮ್ಮ ಮಕ್ಕಳಿಗೆ ಮಾತೃಭಾಷೆಯಲ್ಲಿಯೇ ಮಾತನಾಡಿಸುವುದರಿಂದ ನಮ್ಮ ಭಾಷೆಯನ್ನು ಉಳಿಸಿಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಕುಂದಾಪ್ರ ಕನ್ನಡದಲ್ಲಿ ಚಲನ ಚಿತ್ರವಾಗಬೇಕು, ಅಧ್ಯಯನ ಪೀಠಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಎ.ಎಸ್.ಎನ್ ಹೆಬ್ಬಾರ್ ಹೇಳಿದರು.

ಶ್ರೀ ಕ್ಷೇತ್ರ ಅಂಬಲಪಾಡಿಯ ಧರ್ಮದರ್ಶಿ ಡಾ. ವಿಜಯ ಬಲ್ಲಾಳ ದೀಪ ಬೆಳಗಿ ಕಾಂಬ ಸಮ್ಮೇಳನವನ್ನು ಉದ್ಘಾಟಿಸಿ, ಕುಂದಾಪ್ರ ಕನ್ನಡ ಭಾಷೆಗೆ ಒಂದು ಗಟ್ಟಿತನವಿದೆ. ಈ ಭಾಷೆಲಿ ಮಾತಾಡಲು ಎಷ್ಟು ಚೆನ್ನವೋ ಬೈಸಿಕೊಳ್ಳಲೂ ಅಷ್ಟೇ ಚೆನ್ನ. ಇದು ಕಿವಿಗೆ ಇಂಪು, ಮನಕ್ಕೆ ತಂಪು. ಕುಂದಾಪ್ರದವರು ಸಮಾಧಾನಿಗಳು. ಭಾಷೆಗಾಗಿ ಹೋರಾಡಿದವರಲ್ಲ. ತುಳು ಭಾಷೆಯಲ್ಲಿ ಪಾಡ್ದನ, ಇತರ ಜಾನಪದ ಹಾಡುಗಳಿದ್ದರೂ ಕುಂದಾಪ್ರ ಕನ್ನಡದ ಹಾಡುಗಳು ಕೇಳಲು ಖುಷಿ. ಮೊಗೇರಿ ಗೋಪಾಲಕೃಷ್ಣ ಅಡಿಗರು, ವೈದೇಹಿ ಮೊದಲಾದ ಸಾಹಿತಿಗಳು ಕುಂದಾಪ್ರ ಕನ್ನಡ ಭಾಷೆಗೆ ಬಹಳಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಕುಮಾರವ್ಯಾಸ ಭಾರತದಲ್ಲೂ ಕುಂದಾಪ್ರ ಕನ್ನಡದ ಶಬ್ದಗಳಿವೆ. ಈ ವಿಶಿಷ್ಟ ಭಾಷೆಯನ್ನು ಉಳಿಸಿ ಬೆಳೆಸಲು ಇಲ್ಲಿನ ಜನರು, ಸಾಹಿತಿಗಳು, ಅಕಾಡೆಮಿ ಸರ್ಕಾರ ಇನ್ನಷ್ಟು ಯತ್ನಿಸಬೇಕು ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ ಕರ್ನಾಟಕದಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಮಾತನಾಡುವವರ ಸಂಖ್ಯೆ ಹೆಚ್ಚಿದ್ದು, ಇದರಿಂದ ಸ್ಥಳೀಯ ಭಾಷೆಗಳು ಉಳಿದುಕೊಂಡಿವೆ. ಯಕ್ಷಗಾನ, ಕಲೆ ಸಂಸ್ಕೃತಿ, ಸಾಹಿತ್ಯದ ಜ್ಞಾನವನ್ನು ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿಯೇ ತಿಳಿಸುವತ್ತ ಪೋಷಕರು ಗಮನ ನೀಡಬೇಕು ಎಂದರು.

ಕೋಟತಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್‌ ಅಧ್ಯಕ್ಷತೆ ವಹಿಸಿದ್ದರು.
ದತ್ತಿನಿಧಿ ಪುರಸ್ಕಾರ ಸಮಾರಂಭದಲ್ಲಿ ವೆಂಕಟೇಶ ವೈದ್ಯ ಅವರಿಗೆ ಕೋಟ ವೈಕುಂಠ ಯಕ್ಷ ಸಂಘಟಕ ಪುರಸ್ಕಾರ, ಕಿರಣ ಗರಡಿ ಮಜಲು ಅವರಿಗೆ ಮಂಜುನಾಥ ಕೋಟ ರಂಗಭೂಮಿ ಪುರಸ್ಕಾರ, ಪ್ರಸಾದ ಕಾಂಚನ್‌ ಅವರಿಗೆ ಕೆ.ಸಿ.ಕುಂದರ್‌ ಯುವ ಉದ್ಯಮಿ ಪುರಸ್ಕಾರ ಮತ್ತು ಶ್ಯಾಮಸುಂದರ ಶೆಟ್ಟಿ ಅವರಿಗೆ ಕೆ.ಸಿ.ಕುಂದರ್‌ ಸಾಂಪ್ರದಾಯಿಕ ಉದ್ಯಮ ಪುರಸ್ಕಾರ ನೀಡಿ ಗೌರವಿಸಲಾಯಿತು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಬ್ರಹ್ಮಾವರ ತಾಲ್ಲೂಕು ಅಧ್ಯಕ್ಷ ರಾಮಚಂದ್ರ ಐತಾಳ, ಕೋಟ ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ ಆಚಾರ್‌, ಬ್ರಹ್ಮಾವರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ ಅಚ್ಲಾಡಿ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ ಕುಂದರ್‌, ಮತ್ತಿತರರು ಇದ್ದರು.
ಡಾ.ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್‌ ಕೋಟ ಸ್ವಾಗತಿಸಿದರು.
ಅಧ್ಯಾಪಕ ಸತೀಶ ವಂದಿಸಿದರು. ಶಿಬಿರಾರ್ಥಿ ಮಾನಸ ಕಾರ್ಯಕ್ರಮ ನಿರೂಪಿಸಿದರು.

ಡಾ. ಶಿವರಾಮ ಕಾರಂತ ಪ್ರಶಸ್ತಿ ಪ್ರತಿಷ್ಠಾನ ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್, ‘ಉಸಿರು’  ಕೋಟ, ಬ್ರಹ್ಮಾವರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಕುಂದಾಪ್ರ ಕನ್ನಡ ಪರಿಷತ್ತು ಉಡುಪಿ ಜಿಲ್ಲೆ ಮತ್ತು ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಮಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಈ ಸಮ್ಮೇಳನವನ್ನು ಆಯೋಜಿಸಲಾಗಿತ್ತು.
ಕುಂದಕನ್ನಡ ಚಿಂತಕ ಡಾ.ಅಣ್ಣಯ್ಯ ಕುಲಾಲ ಸ್ಮರಣಿಕೆ ನೀಡಿದರು. ನಂತರ ಕುಂದಾಪ್ರ ಕನ್ನಡದಲ್ಲಿ ಬಹುವಿಧ ಗೋಷ್ಟಿ, ಕುಂದಕನ್ನಡ ಹರಟೆ ಗುಣಮೇಲೋ, ಹಣ ಮೇಲೋ ಕಾರ್ಯಕ್ರಮಗಳು ನಡೆದವು.