ಡೈಲಿ ವಾರ್ತೆ: 06 ಅಕ್ಟೋಬರ್ 2022

ಅಮೆರಿಕದಲ್ಲಿ ಅಪಹರಣಗೊಂಡಿದ್ದ ಭಾರತೀಯ ಕುಟುಂಬದ ನಾಲ್ವರ ಶವ ಪತ್ತೆ

ವಾಷಿಂಗ್ಟನ್: ಎಂಟು ತಿಂಗಳ ಹೆಣ್ಣು ಮಗುವಿನ ಸಹಿತ ಅಪಹರಣಗೊಂಡಿದ್ದ ಭಾರತ ಮೂಲದ ಕುಟುಂಬದ ನಾಲ್ವರ ಮೃತದೇಹ ಅಮೆರಿಕ ಸಂಯುಕ್ತ ಸಂಸ್ಥಾನದ ತೋಟವೊಂದರಲ್ಲಿ ಶವವಾಗಿ ಪತ್ತೆಯಾಗಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

8 ತಿಂಗಳ ಹೆಣ್ಣು ಮಗು ಆರೂಹಿ ದೇರಿ, ಆಕೆಯ ಪೋಷಕರಾದ 27ರ ಜಸ್ಲೀನ್ ಕೌರ್, 36ರ ಜಸ್ದೀಪ್ ಸಿಂಗ್, ಮಗುವಿನ ಸೋದರ ಮಾವ 39ರ ಅಮನ್ದೀಪ್ ಸಿಂಗ್ ಮೃತಪಟ್ಟವರು. ಅವರನ್ನು ಸೋಮವಾರ ಅಪಹರಿಸಲಾಗಿತ್ತು. ಬುಧವಾರ ಅವರ ಶವಗಳು ದೊರೆತಿವೆ ಎಂದು ಮೆರ್ಸೆಡ್ ಕೌಂಟಿ ಪೊಲೀಸರು ತಿಳಿಸಿದ್ದಾರೆ.

ಬುಧವಾರ ಸಂಜೆ ಇಂಡಿಯಾನಾ ಮತ್ತು ಹಟ್ಚಿನ್ಸನ್ ರಸ್ತೆಯ ಪಕ್ಕದ ತೋಟವೊಂದರಲ್ಲಿ ನಾಲ್ವರ ಶವಗಳು ಪತ್ತೆಯಾಗಿವೆ ಎಂದು ಮೆರ್ಸೆಡ್ ಕೌಂಟಿ ಶರೀಫ್ ವೆರ್ನ್ ವಾರ್ನಂಕೆ ತಿಳಿಸಿದ್ದಾರೆ. ತೋಟದ ಕೆಲಸಗಾರನೊಬ್ಬನು ಮೃತ ದೇಹಗಳನ್ನು ಮೊದಲು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

“ಈ ಶೋಕ ದುರಂತವನ್ನು ತಿಳಿಸಲು ನನ್ನ ಬಳಿ ಶಬ್ದಗಳೇ ಇಲ್ಲ” ಎಂದು ಸಂಜೆ ಪತ್ರಿಕಾಗೋಷ್ಠಿ ನಡೆಸಿದ ಶರೀಫ್ ತಿಳಿಸಿದರು ಎಂದು ಮಾಧ್ಯಮ ವರದಿ ಮಾಡಿದೆ.

ಅಪಹರಣವಾದ ಮರುದಿನ ಪೊಲೀಸರು ಸಂಶಯದ ಆಧಾರದಲ್ಲಿ 48ರ ಹರೆಯದ ಜೀಸಸ್ ಮ್ಯಾನುವಲ್ ಸಲ್ಗಾದೋ ಎಂಬವನನ್ನು ಬಂಧಿಸಿದ್ದರು.