ಡೈಲಿ ವಾರ್ತೆ: 31 ಅಕ್ಟೋಬರ್ 2022

ಸಂಪಾದಕರು: ಇಬ್ರಾಹಿಂ ಕೋಟ

ನಿತ್ಯಾನ್ನದಾನ ಕ್ರಮವಿರುವ ಪುಣ್ಯಕ್ಷೇತ್ರಗಳಲ್ಲಿ ಸಮೃದ್ಧಿಯುಂಟಾಗುತ್ತದೆ: ಡಾ. ಜಿ. ಶಂಕರ್

  • ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ – ಅನ್ನ ಸಂತರ್ಪಣೆಗೆ ಚಾಲನೆ

ಕುಂದಾಪುರ : ನಿತ್ಯಾನ್ನದಾನ ಕ್ರಮವಿರುವ ಪುಣ್ಯಕ್ಷೇತ್ರಗಳಲ್ಲಿ ಸಮೃದ್ಧಿಯುಂಟಾಗುತ್ತದೆ. ಕೋಟಿಲಿಂಗೇಶ್ವರ ದೇವಳದಲ್ಲಿ ಇದೀಗ ಆರಂಭಗೊಂಡ ಅನ್ನದಾನ ಸೇವೆಯನ್ನು ದಾನಿಗಳ ನೆರವಿನಿಂದ ನಿರಂತರಗೊಳಿಸಬೇಕು ಎಂದು ನಾಡೋಜ ಡಾ. ಜಿ. ಶಂಕರ್ ಕರೆನೀಡಿದರು.
ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಾಲಯದಲ್ಲಿ ನೂತನವಾಗಿ ಆರಂಭಗೊಂಡ ಪ್ರತಿ ಸೋಮವಾರದ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.



ನೂತನವಾಗಿ ಸ್ಥಾಪಿಸಲಾದ ಅನ್ನದಾನ ನಿಧಿಯನ್ನು ಉದ್ಘಾಟಿಸಿದ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಾಲಯದ ಹಿರಿಯ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ ಮಾತನಾಡಿ, ಆಗಮ ಶಾಸ್ತ್ರದಂತೆ, ದೇವಾಲಯಗಳ ಅಭಿವೃದ್ಧಿಗೆ ಅಲ್ಲಿನ ಅರ್ಚಕರ ಅನುಷ್ಠಾನ, ದೇವಾಲಯಗಳಲ್ಲಿ ನಿರಂತರ ಪುರಾಣ ಇತ್ಯಾದಿ ಸದ್ಗ್ರಂಥಗಳ ಪಾರಾಯಣ, ಕಟ್ಟುನಿಟ್ಟಿನ ನಿಯಮ ಪಾಲನೆ, ಉತ್ಸವಗಳು ಮತ್ತು ಅನ್ನದಾನ ಮುಖ್ಯವಾದವುಗಳು. ಯಾವುದೇ ಅಭಿವೃದ್ಧಿ ಕಾರ್ಯಗಳೂ ಭಕ್ತರ ಸಹಕಾರದಿಂದಲೇ ಆಗಬೇಕಾಗಿದೆ. ಆದ್ದರಿಂದ ಕೋಟಿಲಿಂಗೇಶ್ವರನ ಭಕ್ತರು ತುಂಬು ಸಹಕಾರ ನೀಡುವುದರ ಮೂಲಕ ನಿತ್ಯಾನ್ನದಾನ ನಿರಂತರವಾಗಿ ನೆರವೇರುವಂತೆ ಮಾಡಬೇಕು ಎಂದರು.



ಜೀರ್ಣೋದ್ಧಾರ ಸಮಿತಿಯ ಮಾಜಿ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತ ಶುಭ ಹಾರೈಸಿ, ಬ್ರಹ್ಮಕಲಶೋತ್ಸವದ ನಂತರ ಕ್ಷೇತ್ರದಲ್ಲಿ ಅಭಿವೃದ್ಧಿ ಆರಂಭಗೊಂಡಿದೆ ಎಂದರು.



ಅನ್ನದಾನ ಯೋಜನೆಗೆ ದೇಣಿಗೆ ನೀಡಿದ ದಾನಿಗಳು ಹಾಗೂ ಕಾಮನ್ ವೆಲ್ತ್ ಕ್ರೀಡಾಕೂಟದ ವೈಟ್ ಲಿಫ್ಟಿಂಗ್ ಸ್ಪರ್ಧಿ ಜಿ. ವಿ. ಅಶೋಕ್ ಅವರುಗಳನ್ನು ಸನ್ಮಾನಿಸಲಾಯಿತು.

ವ್ಯವಸ್ಥಾಪನಾ ಸಮಿತಿ ಸದಸ್ಯ ಸುರೇಶ್ ಬೆಟ್ಟಿನ್ ಪ್ರಾಸ್ತಾಕವಿಕ ಮಾತನಾಡಿ, ಕ್ಷೇತ್ರದಲ್ಲಿ ಮೂಲಭೂತ ವ್ಯವಸ್ಥೆ ಕಲ್ಪಿಸಲು ಸ್ಥಳದ ಕೊರತೆಯಿದೆ. ದಾನಿಗಳು ಕನಿಷ್ಠ ಐದು ಸೆಂಟ್ಸ್ ಭೂಮಿಯನ್ನು ನೀಡಿದರೆ, ಅದನ್ನು ಖರೀದಿಸಿ ಶೌಚಾಲಯ ಇತ್ಯಾದಿ ವ್ಯವಸ್ಥೆ ಮಾಡಲಾಗುವುದು. ಶೀಘ್ರವೇ ದಾನಿಗಳ ಸಹಕಾರದಲ್ಲಿ ಪರಿವಾರ ದೇವರ ಗುಡಿಗಳನ್ನು ನವೀಕರಿಸಲಾಗುವುದು ಎಂದರು.

ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ಪ್ರಭಾಕರ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ತಂತ್ರಿ ವೇದಮೂರ್ತಿ ಪ್ರಸನ್ನ ಕುಮಾರ್ ಐತಾಳ, ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣ ಗೊಲ್ಲ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ಕುಂದಾಪುರದ ಶ್ರೀ ಕುಂದೇಶ್ವರ ದೇವಳ ಸಮಿತಿ ಅಧ್ಯಕ್ಷ ಕೃಷ್ಣಾನಂದ ಚಾತ್ರ, ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನ ಸಮಿತಿ ಅಧ್ಯಕ್ಷ ಶ್ರೀಧರ ಕಾಮತ್, ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಳ ಧರ್ಮದರ್ಶಿ ದೇವರಾಯ ಶೇರಿಗಾರ್, ಶ್ರೀ ಕೋಟಿಲಿಂಗೇಶ್ವರ ದೇವಳ ಸಮಿತಿ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಶಿಲ್ಪಿ ರಾಜಗೋಪಾಲ್ ಆಚಾರ್ಯ, ಗುತ್ತಿಗೆದಾರ ರಾಜೇಶ್ ಕಾರಂತ, ಸಮಾಜ ಸೇವಕ ಶಂಕರ ದೇವಾಡಿಗ, ಉದ್ಯಮಿ ಸುಧೀರ್ ಪಂಡಿತ್ ಮುಖ್ಯ ಅಭ್ಯಾಗತರಾಗಿದ್ದು ಶುಭ ಹಾರೈಸಿದರು.

ದೇವಾಲಯ ವ್ಯವಸ್ಥಾಪನಾ ಸಮಿತಿ ಸದಸ್ಯರು, ಉದ್ಯಮಿ ಎನ್. ವಿ. ರಾಘವೇಂದ್ರ ರಾವ್,
ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ದಾನಿ ಸತ್ಯನಾರಾಯಣ ಐತಾಳ, ಅಸ್ತಿಕ ಸಮಾಜದ ಅಧ್ಯಕ್ಷ ರವೀಂದ್ರ ಐತಾಳ, ಕಾರ್ಯದರ್ಶಿ ವಿನೋದ್ ಶೇಟ್, ವಿವಿಧ ದೇವಾಲಯಗಳ ಧರ್ಮದರ್ಶಿಗಳು ಉಪಸ್ಥಿತರಿದ್ದರು.

ಸಮಿತಿ ಸದಸ್ಯೆ ಚಂದ್ರಿಕಾ ಧನ್ಯ ಸ್ವಾಗತಿಸಿದರು. ಚಂದ್ರಶೇಖರ ಕಾರ್ಯಕ್ರಮ ನಿರ್ವಹಿಸಿ , ಸಮಿತಿ ಸದಸ್ಯ ಮಂಜುನಾಥ ಆಚಾರ್ಯ ವಂದಿಸಿದರು.

ಉದ್ಘಾಟನಾ ಸಮಾರಂಭದ ಪೂರ್ವದಲ್ಲಿ ಶ್ರೀ ರಾಮ ಭಜನಾ ಮಂಡಳಿ ಗೋಪಾಡಿ – ಬೀಜಾಡಿ ಮತ್ತು ಶ್ರೀ ದುರ್ಗಾ ಮಹಿಳಾ ಭಜನಾ ಮಂಡಳಿ ಗೋಪಾಡಿ ಇವರುಗಳಿಂದ ಕುಣಿತ ಭಜನೆ ನಡೆಯಿತು. ಕಾರ್ತಿಕ ಮಾಸದ ಮೊದಲ ಸೋಮವಾರದ ಆರಂಭಿಕ ಸೇವೆಯಾಗಿ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿಯವರ ಕುಟುಂಬಿಕರ ವತಿಯಿಂದ ಶತರುದ್ರಾಭಿಷೇಕ ಮತ್ತು ಅನ್ನ ಸಂತರ್ಪಣೆ ನಡೆಯಿತು. ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಅನ್ನಪ್ರಸಾದ ಸ್ವೀಕರಿಸಿದರು. ಪ್ರಸ್ತುತ, ಕಾರ್ತಿಕ ಮಾಸದ ಪ್ರತಿ ಸೋಮವಾರಗಳಂದು ಮಧ್ಯಾನ್ಹ ಅನ್ನ ಸಂತರ್ಪಣೆ ನಡೆಯಲಿದ್ದು, ನಂತರದ ಮಾಸಗಳಲ್ಲಿ ಪ್ರತಿ ಮೊದಲ ಸೋಮವಾರ ಮಧ್ಯಾನ್ಹ ಮಾತ್ರ ಸಾರ್ವಜನಿಕ ಪ್ರಸಾದ ಭೋಜನ ವ್ಯವಸ್ಥೆ ಮುಂದುವರೆಯಲಿದೆ.