ಡೈಲಿ ವಾರ್ತೆ: 01 ನವಂಬರ್ 2022

ಕರಾವಳಿ ಕೋಗಿಲೆಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ.

  • ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಗೋಕರ್ಣದ ಸುಬ್ರಹ್ಮಣ್ಯ ಧಾರೇಶ್ವರ

ಗೋಕರ್ಣ : ಮೂಲತಃ ಉತ್ತರಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಹುಟ್ಟಿದ, ಯಕ್ಷಗಾನದಲ್ಲಿ ಕರಾವಳಿ ಕೋಗಿಲೆ ಎಂದೇ ಪ್ರಸಿದ್ಧಿ ಪಡೆದ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರು (65) ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
05/09/1957 ಜನಿಸಿದ ಅವರು ಚಿಕ್ಕವರಾಗಿದ್ದಾಗಲೇ ಸಂಗೀತದಲ್ಲಿ ಆಸಕ್ತಿ ಹೊಂದಿದ್ದರು. ಸ್ಥಳೀಯ ಹವ್ಯಾಸಿ ಸಂಗೀತಕಾರ ಜಟ್ಟಯ್ಯ ಭಟ್ ಇವರ ಸಂಗಡ ಹಾರ್ಮೋನಿಯಂ ಭಾರಿಸಲು ಹೋಗುತ್ತಿದ್ದರು. ನಂತರ ದಕ್ಷಿಣಕನ್ನಡದ ಅಮೃತೇಶ್ವರಿ ಮೇಳದಲ್ಲಿ ವಿದ್ಯುತ್ ಕೆಲಸಗಾರರಾಗಿ ಸೇರಿಕೊಂಡರು.


ಕ್ರಮೇಣ ಭಾಗವತಿಗೆಯಲ್ಲಿ ಆಸಕ್ತಿ ತೋರಿ ಅಲ್ಲಿಯ ಮುಖ್ಯ ಭಾಗವತರಾದ ನಾರಾಯಣ ಉಪ್ಪೂರರಲ್ಲಿ ಯಕ್ಷಗಾನ ಭಾಗವತಿಗೆ ಕಲಿಯಲು ಪ್ರಾರಂಭಿಸಿದರು. ಅಲ್ಲಿಂದ ಅವರ ಹಣೆ ಬರಹವೇ ಬದಲಾಯಿತು.
ಅಲ್ಲಿಂದ ಹೊಂತಿರುಗಿ ನೋಡದ ಇವರು ಯಕ್ಷಗಾನ ಕ್ಷೇತ್ರದಲ್ಲಿ ಸುದೀರ್ಘ 44 ವರ್ಷಗಳ ಸೇವೆ ಸಲ್ಲಿಸಿದ್ದಾರೆ. 1978 ರಿಂದ 1985 ರ ತನಕ ಅಮೃತೇಶ್ವರಿ ಯಕ್ಷಗಾನ ಮಂಡಳಿ ಕೋಟ ಇದರಲ್ಲಿ ಸಹ ಭಗವತರಾಗಿ ದುಡಿಮೆ. ನಂತರ 1986 ರಿಂದ 2012 ರವರಗೆ 26 ವರ್ಷಗಳ ಕಾಲ ಪೆರ್ಡ್ಡೂರು ಮೇಳದಲ್ಲಿ ಪ್ರಧಾನ ಭಾಗವತರಾಗಿ, ನಿರ್ದೇಶಕ, ಕಥಾ ಸಂಯೋಜಕನಾಗಿ ಮೇಳವನ್ನು ಮುನ್ನೆಡೆಸಿದ ಹಿರಿಮೆ ಇವರದು.


ಯಕ್ಷಗಾನ ರಂಗದಲ್ಲಿ ಪ್ರಪ್ರಥಮವಾಗಿ ಹೊಸ ರಾಗಗಳನ್ನು, ಹೊಸ ತಾಂತ್ರಿಕತೆಯನ್ನು ಯಶಸ್ವಿಯಾಗಿ ಬಳಸಿ, ಪೌರಾಣಿಕ, ಇತಿಹಾಸಿಕ ಹಾಗೂ ಸಾಮಾಜಿಕ ಯಕ್ಷಗಾನ ಪ್ರಸಂಗ ರಚನೆ, ನಿರ್ದೇಶನ, ಸಂಯೋಜನೆ ಹಾಗೂ ಪ್ರದರ್ಶನ ನೀಡಿದ ಕೀರ್ತಿ ಇವರದು. ಸ್ಥಳೀಯ ಯಂಗಸ್ಟಾರ್ ಕ್ಲಬ್ ನ ಸಕ್ರೀಯ ಸದಸ್ಯರಾಗಿ ಸಾಮಾಜಿಕ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.


ಕರಾವಳಿ ರತ್ನ, ಕನ್ನಡ ಕುಲಭೂಷಣ, ಶ್ರೀ ಗುರು ನರಸಿಂಹ, ಶ್ರೀರಾಮ ವಿಠಲ, ನಾರ್ಣಪ್ಪ ಉಪ್ಪೂರು, ಕಾಳಿಂಗ ನಾವುಡ ಪ್ರಶಸ್ತಿ ಸೇರಿದಂತೆ ವಿದೇಶಗಳಲ್ಲೂ ಅನೇಕ ಪ್ರಶಸ್ತಿಗಳಿಸಿ ಯಕ್ಷಗಾನದ ಉಳಿವಿಗಾಗಿ ಸತತ ಪರಿಶ್ರಮ ಇವರದು.