ಡೈಲಿ ವಾರ್ತೆ: 14/ಮೇ /2024
ಕೋಟೇಶ್ವರ – ಶ್ರೀ ಶಂಕರ ಜಯಂತಿ ಆಚರಣೆ
ಕುಂದಾಪುರ :ಸನಾತನ ಧರ್ಮ ಸಂಕಷ್ಟದಲ್ಲಿದ್ದಾಗ ಅವತರಿಸಿ ಧರ್ಮ ಸಂಸ್ಥಾಪನೆ ಮಾಡಿದವರು ಶ್ರೀ ಶಂಕರ ಭಗವತ್ಪಾದರು. ಆದ್ದರಿಂದಲೇ ಅವರಿಗೆ ಧರ್ಮ ಸಂಸ್ಥಾಪನಾಚಾರ್ಯ ಎಂದು ಹೇಳುವರು. ವೇದ, ವೇದಾಂತಗಳನ್ನು ಅರಿತವರು ಅವರು. ವೇದಗಳ ಅಂತ್ಯದವರೆಗೂ ಅರಿತು ಭಾಷ್ಯ ಬರೆದು ಸರಳಗೊಳಿಸಿದರು. ಇಂದು ಸನಾತನ ಧರ್ಮ ಉಚ್ರಾಯ ಸ್ಥಿತಿಯಲ್ಲಿದೆಯೆಂದರೆ ಶಂಕರಾಚಾರ್ಯರೂ ಸೇರಿದಂತೆ ಆಚಾರ್ಯ ತ್ರಯರ ಕೊಡುಗೆ ಅಪಾರವಾಗಿದೆ ಎಂದು ವೇದಮೂರ್ತಿ ಜಿ. ರಾಘವೇಂದ್ರ ಅಡಿಗ ಹೇಳಿದರು.
ಕೋಟೇಶ್ವರದ ಶ್ರೀ ಶಂಕರ ಜಯಂತಿ ಉತ್ಸವ ಸಮಿತಿಯ ಆಶ್ರಯದಲ್ಲಿ ಶ್ರೀ ಕೋಟಿಲಿಂಗೇಶ್ವರ ದೇವಳದಲ್ಲಿ ನಡೆದ ಶ್ರೀ ಶಂಕರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಉಪನ್ಯಾಸ ನೀಡಿದರು.
ಜಗತ್ತು ಮಿಥ್ಯ, ಬ್ರಹ್ಮವೊಂದೇ ಸತ್ಯ. ನಮ್ಮಲ್ಲಿರುವ ಜೀವಾತ್ಮನೇ ಬ್ರಹ್ಮ ಎಂದು ಪ್ರತಿಪಾದಿಸಿದ ಅವರು, ಜಗತ್ತು, ಜೀವನ ಮಿಥ್ಯ ಎಂದರೆ ಅವುಗಳನ್ನು ಅಲ್ಲಗಳೆಯಲಾಗದು. ಆದರೆ, ಅವು ಜೀವಾತ್ಮನ ಉದ್ಧಾರಕ್ಕೆ ಕಾರಣವಾಗಲಾರವು. ಜ್ಞಾನವೊಂದೇ ನಮ್ಮನ್ನು ಪರಬ್ರಹ್ಮನೆಡೆಗೆ ಒಯ್ಯಬಲ್ಲುದು ಎಂದು ಹೇಳಿದ್ದಾರೆ ಎಂದು ವಿವರಿಸಿದ ಅಡಿಗರು, ಶ್ರೀ ಶಂಕರರ ಜನ್ಮದಿನವನ್ನು ಸರ್ಕಾರ ತತ್ವಜ್ಞಾನಿಗಳ ದಿನ ಎಂದು ಘೋಷಿಸಿದೆ ಎಂದರು.
ದೇವಳದ ತಂತ್ರಿ ವೇದಮೂರ್ತಿ ಪ್ರಸನ್ನಕುಮಾರ ಐತಾಳ ಶುಭಾಶಂಸನೆಗೈದರು. ಶ್ರೀ ಶಂಕರ ಜಯಂತಿ ಉತ್ಸವ ಸಮಿತಿಯ ಗೌರವಾಧ್ಯಕ್ಷ ಚಂದ್ರಶೇಖರ ಅಡಿಗ ಪ್ರಸ್ತಾವನಾ ಮಾತುಗಳನ್ನಾಡಿದರು. ಕಾರ್ಯದರ್ಶಿ ಅನಸೂಯಾ ಭಟ್ ವಾರ್ಷಿಕ ವರದಿ ಓದಿದರು. ಸಮಿತಿಯ ಅಧ್ಯಕ್ಷ ಕೆ. ರಾಮಚಂದ್ರ ಉಪಾಧ್ಯ ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕಾಧ್ಯಕ್ಷ ಬಡಾಮನೆ ಪದ್ಮನಾಭ ಐತಾಳ ವೇದಿಕೆಯಲ್ಲಿದ್ದರು. ಸರೋಜಿನಿ ಅಡಿಗ ಶ್ರೀ ಶಂಕರಾಚಾರ್ಯ ರಚಿತ ಜಾಗೃತ ಪಂಚಕ ಪಠಿಸಿದರು. ಪ್ರಭಾಕರ ಮಿತ್ಯಂತ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಅನಸೂಯಾ ಭಟ್ ವಂದಿಸಿದರು. ನಂತರ ಶ್ರೀ ಶಂಕರ ಭಗವತ್ಪಾದರ ಪೂಜೆ ನೆರವೇರಿಸಲಾಯಿತು. ಜಯಂತಿಯ ಅಂಗವಾಗಿ ಸಮಿತಿಯ ಸದಸ್ಯರು ಸ್ತೋತ್ರ ಪಠಣ, ಸೌಂದರ್ಯ ಲಹರಿ, ಲಿಂಗಾಷ್ಟಕಮ್, ಶಂಕರಾಚಾರ್ಯ ಅಷ್ಟೊತ್ತರ ಶತನಾಮಾವಳಿಗಳ ಪಠಣ ನಡೆಸಿದರು.