ಡೈಲಿ ವಾರ್ತೆ: 14/ಮೇ /2024
ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ – ವಿಪ್ರವಾಣಿ ಪತ್ರಿಕೆಯ ನೂರನೆಯ ವಿಶೇಷ ಸಂಚಿಕೆ ಬಿಡುಗಡೆ
ಕುಂದಾಪುರ : ಬ್ರಾಹ್ಮಣನಾದವನು ದ್ವಿಜತ್ವ ಪಡೆದ ನಂತರ ತನ್ನ ಜೀವನದಲ್ಲಿ ಸಾಧನೆಯ ಲಕ್ಷ್ಯ ಹೊಂದಿರಬೇಕು. ನಮ್ಮ ಸಾಮಾಜಿಕ ಸಾಧನೆಗಳು ಸಮುದ್ರದಲ್ಲಿನ ನೊರೆಯಂತೆ ಕ್ಷಣಿಕ. ಆದ್ದರಿಂದ ನಮ್ಮೊಳಗಿನ ಸ್ಥಿರವಾದ ಆತ್ಮಶಕ್ತಿಯ ಮೂಲಕ ಸಾಧನೆ ಮಾಡಬೇಕು. ಬ್ರಾಹ್ಮಣರಿಗೆ ಗೋತ್ರದ ಮೂಲಕ ಸಪ್ತರ್ಷಿಗಳ ಸಂಬಂಧದ ತಂತುವಿರುತ್ತದೆ. ಈ ಮೂಲಕ ನಾವು ಸಾಧನೆ ಮಾಡಿ ಪರಬ್ರಹ್ಮನೆಡೆಗೆ ತಲುಪುವುದು ಇತರರಿಗಿಂತ ಸುಲಭ. ಈ ಮೂಲಕ ವಿಪ್ರರು ತಮ್ಮ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಹಿರಿಯ ವಿಧ್ವಾಂಸ, ಸಾಹಿತಿ ಉಪ್ಪುಂದ ಚಂದ್ರಶೇಖರ ಹೊಳ್ಳ ಕರೆನೀಡಿದರು.
ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ನ ಹೆಮ್ಮೆಯ ಮುಖವಾಣಿ ‘ವಿಪ್ರವಾಣಿ’ ಪತ್ರಿಕೆಯ ನೂರನೆಯ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಬ್ರಾಹ್ಮಣ ಸಂಘಟನೆಯ ಚಟುವಟಿಕೆಗಳು ಬಹು ಹಿಂದೆಯೇ ಚೆನ್ನೈ ಯಲ್ಲಿ ಆರಂಭಗೊಂಡು ಈ ಭಾಗಕ್ಕೆ ವಿಸ್ತರಿಸಿತು ಎಂಬುದನ್ನು ಸ್ಮರಿಸಿದ ಹೊಳ್ಳರು, ಇದೀಗ ನಮ್ಮಲ್ಲಿ ವಿಪ್ರ ಸಂಘಟನೆ ಬಲವಾಗಿದೆ. ಇದರ ಮುಖ್ಯ ಧ್ಯೇಯವಾದ ಸ್ವಾವಲಂಬನೆ, ಸಂಘಟನೆ ಮತ್ತು ಸಂಸ್ಕೃತಿ ರಕ್ಷಣೆ ಈ ಮೂಲಕ ಇನ್ನಷ್ಟು ನಡೆಯಬೇಕು. ಬ್ರಾಹ್ಮಣ ಯಾವ ಸಂಘಟನೆಯಲ್ಲಿದ್ದರೂ ಆತನನ್ನು ಬ್ರಾಹ್ಮಣ ಎಂದೇ ಗುರುತಿಸುತ್ತಾರೆ. ಈ ಕಾರ್ಯಗಳಲ್ಲಿ ಯುವ ಜನರು ಪಾಲ್ಗೊಳ್ಳುವಂತೆ ಆಗಬೇಕು ಎಂದು ಸಲಹೆ ನೀಡಿದರು.
ಆರಂಭದಲ್ಲಿ ಉದ್ಯಮಿ ಕಿರಿಮಂಜೇಶ್ವರ ಉಮೇಶ್ ಶಾನುಭಾಗ ಶ್ರೀ ಗಾಯತ್ರೀ ದೇವಿಯ ಚಿತ್ರಪಟದ ತೆರೆ ಸರಿಸುವಮೂಲಕ ಸಂಚಿಕೆಯನ್ನು ಅನಾವರಣಗೊಳಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾದ ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ಉಪಾಧ್ಯಕ್ಷ ಕೃಷ್ಣಾನಂದ ಚಾತ್ರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣ ಸಂಘಟನೆಯ ಕಾರ್ಯಗಳು ಎಲ್ಲೆಡೆ ವಿಸ್ತರಿಸಿ ಸಂಘಟನೆಗೆ ಬಲ ತುಂಬಿದೆ. ರಾಜಕೀಯವಾಗಿಯೂ ವಿಪ್ರರು ಬಲಗೊಳ್ಳುವ ಅಗತ್ಯವಿದೆ ಎಂದು ಹೇಳಿ ವಿಪ್ರವಾಣಿ ಪತ್ರಿಕೆಯ ಪಿಡಿಎಫ್ ಮಾದರಿಯನ್ನು ಅಂತರ್ಜಾಲದಲ್ಲಿ ಪ್ರಚುರಪಡಿಸುವಂತೆ ಸಲಹೆ ನೀಡಿದರು.
ಪರಿಷತ್ ಗೌರವಾಧ್ಯಕ್ಷ ಬಿ. ಎಸ್. ಅನಂತಪದ್ಮನಾಭ ಬಾಯಿರಿ, ಬೆಳ್ವೆ, ಪ್ರಧಾನ ಕಾರ್ಯದರ್ಶಿ ರತ್ನಾಕರ ಉಡುಪ, ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷೆ ಸಂಧ್ಯಾ ಉಡುಪ, ಯುವ ವೇದಿಕೆ ಅಧ್ಯಕ್ಷ ಅವನೀಶ ಹೊಳ್ಳ, ಕೋಶಾಧ್ಯಕ್ಷ ರಘುರಾಮ ರಾವ್, ಕೋಟೇಶ್ವರ ವಲಯಾಧ್ಯಕ್ಷ ವಾದಿರಾಜ ಹೆಬ್ಬಾರ್, ವಲಯ ಮಹಿಳಾ ವೇದಿಕೆ ಅಧ್ಯಕ್ಷೆ ವಾಣಿಶ್ರೀ ಹೆಬ್ಬಾರ್ ಉಪಸ್ಥಿತರಿದ್ದರು.
ವಿಪ್ರವಾಣಿ ಪ್ರಧಾನ ಸಂಪಾದಕ ಪ್ರೊ. ಶಂಕರ ರಾವ್ ಕಾಳಾವರ ಪ್ರಸ್ತಾವನೆಗೈದು, ಪತ್ರಿಕೆ ಇಪ್ಪತ್ತೈದು ವರ್ಷಗಳಿಂದ ಅವಿಚ್ಚಿನ್ನವಾಗಿ ನಡೆದುಬಂದ ಬಗೆಯನ್ನು ವಿವರಿಸಿ, ಕಾರಣೀಕರ್ತರಿಗೆಲ್ಲ ಕೃತಜ್ಞತೆಗಳನ್ನು ಸಲ್ಲಿಸಿದರು. ನೂರನೆಯ ಸಂಚಿಕೆಯ ವಿಶೇಷತೆಗಳನ್ನು ವಿವರಿಸಿದರು.
ಪರಿಷತ್ ನ ಪೂರ್ವಾಧ್ಯಕ್ಷರುಗಳು, ವಿಪ್ರವಾಣಿಯ ಪೂರ್ವ ಸಂಪಾದಕರುಗಳಾದ ವಿಶ್ವನಾಥ ಕರಬ, ಪೂರ್ಣಿಮಾ ಭಟ್, ಪರಿಷತ್ ಆಜೀವ ಸದಸ್ಯರ ಕಂಪ್ಯೂಟರಿಕೃತ ಡಾಟಾ ಬೇಸ್ ಮಾಡಿದ ಮಂಜುನಾಥ ರಾವ್, ಕಲ್ಯಾಣ ಮಂಟಪ ಮಾಲೀಕ ರಮೇಶ್ ಭಟ್, ಲೇಖಕರಾದ ಹಳ್ಳಿ ಶ್ರೀನಿವಾಸ ಭಟ್, ವೈ ಎನ್ ವೆಂಕಟೇಶ ಮೂರ್ತಿ ಭಟ್, ಅಶೋಕ್ ಕುಮಾರ್ ಹೊಳ್ಳ, ವಿಪ್ರವಾಣಿ ಪ್ರಧಾನ ಸಂಪಾದಕ ಪ್ರೊ. ಶಂಕರ ರಾವ್ ಕಾಳಾವರ – ಮೋಹಿನಿ ದಂಪತಿ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಸಾಧಕರು ಮತ್ತು ದಾನಿಗಳನ್ನು ಗೌರವಿಸಲಾಯಿತು.
ವಿಶೇಷ ಸಂಚಿಕೆಯ ಬಿಡುಗಡೆ ಸಮಾರಂಭದಂಗವಾಗಿ ಆದರ್ಶ ದಂಪತಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಬಸ್ರೂರು ವಲಯದ ಭಾಸ್ಕರ ಉಡುಪ – ನಿರ್ಮಲಾ ಉಡುಪ ಜೋಡಿ ಹಾಗೂ ದ್ವಿತೀಯ ಬಹುಮಾನಿತರಾದ ಕೊಲ್ಲೂರು ವಲಯದ ರಾಘವೇಂದ್ರ ಐತಾಳ – ಲಕ್ಷ್ಮೀ ಐತಾಳ ಜೋಡಿಗಳಿಗೆ ಪ್ರಶಸ್ತಿಗಳನ್ನು ನೀಡಲಾಯಿತು. ಹಂಗಳೂರಿನ ಓಂಕಾರ ಕಲಾ ಬಳಗದ ಸದಸ್ಯೆಯರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರೆ, ಎಲ್ಲಾ ವಲಯದ ಬಂಧು – ಭಗಿನಿಯರು ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ನಡೆಸಿದರು.
ಪರಿಷತ್ ಅಧ್ಯಕ್ಷ ಶುಭಚಂದ್ರ ಹತ್ವಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ರತ್ನಾಕರ ಉಡುಪ ಸ್ವಾಗತಿಸಿದರು. ಅಗಲಿದ ಹಿರಿಯ ಚೇತನಗಳಿಗೆ ಸದ್ಗತಿ ಕೋರಿ ಆರಂಭದಲ್ಲಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಡಾ. ವೆಂಕಟರಾಮ್ ಭಟ್ ನೆಂಪು ಕಾರ್ಯಕ್ರಮ ನಿರೂಪಿಸಿ, ಸತೀಶ್ ಅಡಿಗ ವಂದಿಸಿದರು.