ಡೈಲಿ ವಾರ್ತೆ: 02 ಡಿಸೆಂಬರ್ 2022

ವರದಿ: ಮಾರುತಿ ಬಿ ಕೊಟ್ಟೂರು

ಕೊಟ್ಟೂರು: ಯೋಜನೆ ರೂಪಿಸಲು ತಾಲೂಕು ಕಚೇರಿ ಮತ್ತು ಸರಕಾರಿ ಆಸ್ಪತ್ರೆಗೆ ಡಿಸಿ ಭೇಟಿ

ತಾಲೂಕು ಕಚೇರಿ ಮತ್ತು ಸರಕಾರಿ ಆಸ್ಪತ್ರೆಗೆ ಡಿಸಿ ಭೇಟಿ
ರಸ್ತೆಗಳ ಅದ್ವಾನ, ಕುಡಿವ ನೀರಿನ ಅವ್ಯವಸ್ಥೆ ಕುರಿತು ಬೇಸರ
ಕೊಟ್ಟೂರು ತಾಲೂಕು ಕಚೇರಿ ಮತ್ತು ಸರಕಾರಿ ಆಸ್ಪತ್ರೆಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪಟ್ಟಣಕ್ಕೆ ಆಗಮಿಸಿದ ಡಿಸಿಯವರು ಮೊದಲು ತಾಲೂಕು ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಹಾತ್ಮಾ ಗಾಂಧೀಜಿ ಸಭಾಂಗಣದಲ್ಲಿ ತಹಸೀಲ್ದಾರ ಕಚೇರಿ ಹಾಗೂ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳ ಸಭೆ ನಡೆಸಿದರು. ದಾಖಲೆಗಳಿಗೆ ಸಂಬಂಧಿಸಿದಂತೆ ಮನವಿಗಳು ಬಂದಾಗ ದಾಖಲೆಗಳು ನಮ್ಮಲ್ಲಿ ಲಭ್ಯವಿಲ್ಲ ಎಂದು ಷರಾ ಬರೆಯುವುದಕ್ಕೆ ಜಿಲ್ಲಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿ, ದಾಖಲೆಗಳನ್ನು ನೀಡಬೇಕಾದ ಅಧಿಕಾರಿಗಳು ಲಭ್ಯವಿಲ್ಲ ಎಂದರೆ ಸಮಸ್ಯೆ ಬಗೆಹರಿಯುವುದು ಹೇಗೆ ಎಂದು ಶಿರಸ್ತೆದಾರರನ್ನು ಪ್ರಶ್ನಿಸಿದರು. ಕೂಡ್ಲಿಗಿ ತಾಲೂಕಿನಿಂದ ಬೇರ್ಪಟ್ಟು ಹೊಸ ತಾಲುಕು ಆದ ನಂತರ ಕೆಲ ದಾಖಲೆಗಳು ಇನ್ನೂ ಲಭ್ಯವಾಗಿಲ್ಲ ಎಂಬ ಸಿಬ್ಬಂದಿ ಉತ್ತರಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಯಾವ ದಾಖಲೆಗಳ ಅವಶ್ಯವಿದೆ ಎಂಬುದನ್ನು ಪಟ್ಟಿ ಮಾಡಿ ಮರ‍್ನಾಲ್ಕು ಸಿಬ್ಬಂದಿಯನ್ನು ಕೂಡ್ಲಿಗಿ ಕಚೇರಿಗೆ ನಿಯೋಜಿಸಿ, ಬರಬೇಕಾದ ದಾಖಲೆಗಳನ್ನು ತಂದುಕೊಳ್ಳುವಂತೆ ಖಡಕ್ಕಾಗಿ ಸೂಚಿಸಿದರು.

ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ, ಔಷಧ ವಿತರಣೆ, ಸಿಬ್ಬಂದಿ ಕುರಿತು ತಾಲೂಕು ವೈದ್ಯಾಧಿಕಾರಿ ಡಾ.ಪ್ರದೀಪ್‌ರಿಂದ ಮಾಹಿತಿ ಪಡೆದರು. ಕೊಟ್ಟೂರು ತಾಲೂಕು ಆಸ್ಪತ್ರೆಗೆ ಪ್ರಭಾರಿಯಾಗಿರುವ ಅಧಿಕಾರಿ ವಾರದಲ್ಲಿ ಮೂರು ದಿನ ಬಂದು ಕೆಲಸ ನಿರ್ವಹಿಸಬೇಕು. ತಪಾಸಣೆಗೆ ಬರುವವರಿಗೆ ಆಸ್ಪತ್ರೆಯಲ್ಲಿಯೇ ಮಾತ್ರೆ ಉಚಿತ ವಿತರಣೆ ಮಾಡಬೇಕು. ಹೊರಗಡೆ ಚೀಟಿ ಬರೆಯುವ ಕುರಿತು ದೂರು ಇದ್ದು, ಕ್ರಮ ಕೈಗೊಳ್ಳುವುದಾಗಿ ಹೇಳಿದರು.


ನಂತರ ಸರಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪ್ರತಿಯೊಂದನ್ನು ಪರಿಶೀಲಿಸಿದರು. ಕೊಟ್ಟೂರಿಗೆ ಮಂಜೂರಾಗಿರುವ ೧೦೦ ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಡತ ಪರಿಶೀಲಿಸಿದ ಅವರು, ಹಾಲಿ ಆಸ್ಪತ್ರೆ ಆವರಣದಲ್ಲಿಯೇ ಕಟ್ಟಡ ನಿರ್ಮಿಸುವ ಯೋಜನೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಹಾಲಿ ನಿರ್ಮಾಣದ ಜಾಗ ಸಮರ್ಪಕವಾಗಿಲ್ಲ. ವಿಶಾಲವಾದ ಜಾಗ, ಗಾಳಿ ಬೆಳಕು, ಉತ್ತಮ ಪರಿಸರ ಇರಬೇಕು. ಪಟ್ಟಣಕ್ಕೆ ಹತ್ತಿರ ಇರುವ ಸರಕಾರಿ ಜಾಗ ಅಥವಾ ಸಿಎ ನಿವೇಶನ ಗುರುತಿಸುವಂತೆ ತಹಸೀಲ್ದಾರ ಎಂ.ಕುಮಾರಸ್ವಾಮಿಗೆ ಸೂಚಿಸಿದರು.


ಪಟ್ಟಣದ ಕೂಡ್ಲಿಗಿ ಹರಪನಹಳ್ಳಿ ರಸ್ತೆ ಅದ್ವಾನವಾಗಿದ್ದರೂ ಕಾಮಗಾರಿ ಆರಂಭಿಸದ ಕುರಿತು ಲೋಕೋಪಯೋಗಿ ಇಲಾಖೆ ಎಇಇ ಸುದರ್ಶನ ರೆಡ್ಡಿ ಅವರಿಂದ ಮಾಹಿತಿ ಪಡೆದರು. ಟೆಂಡರ್ ನಂತರದ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ನ.೨೮ರಂದು ಕಾಮಗಾರಿ ಆದೇಶವನ್ನೂ ನೀಡಲಾಗಿದೆ. ರಸ್ತೆ ಅಗೆಯುವ ಕೆಲಸ ಆರಂಭವಾಗಿದೆ ಮೂರು ತಿಂಗಳೊಳಗೆ ರಸ್ತೆ ಕಾಮಗಾರಿ ಪೂರ್ಣಗೊಳಿಸುವುದಾಗಿ ತಿಳಿಸಿದರು. ಕಾಮಗಾರಿ ಆರಂಭಿಸಿ ಅರ್ಧಕ್ಕೆ ಬಿಡಬಾರದು, ಡಿಸೆಂಬರ್‌ನಲ್ಲಿ ಕೊಟ್ಟೂರು ಕಾರ್ತಿಕೋತ್ಸವ, ಫೆಬ್ರವರಿಯಲ್ಲಿ ರಥೋತ್ಸವಗಳಿವೆ. ಅಷ್ಟರೊಳಗೆ ಗುಣಮಟ್ಟದ ಕಾಮಗಾರಿ ಪೂರ್ಣಗೊಳಸಬೇಕು ಎಂದು ಸೂಚಿಸಿದರು.
ತಹಸೀಲ್ದಾರ ಎಂ.ಕುಮಾರಸ್ವಾಮಿ, ಲೋಕೋಪಯೋಗಿ ಇಲಾಖೆ ಎಇಇ ಸುದರ್ಶನ್‌ರೆಡ್ಡಿ, ಎಇ ಖಾಜಾಸಾಬ್, ವೈದ್ಯಾಧಿಕಾರಿ ಡಾ.ಬದ್ಯಾನಾಯ್ಕ ಇದ್ದರು.

ಕೊಟ್ಟೂರು ತಾಲೂಕು ಕಚೇರಿ ಸಭಾಂಗಣದಲ್ಲಿ ತಹಸೀಲ್ದಾರ, ಉಪ ತಹಸೀಲ್ದಾರರೊಂದಿಗೆ ಕಡತ ಪರಿಶೀಲನೆಯನ್ನು ಜಿಲ್ಲಾಧಿಕಾರಿಗಳು ನಡೆಸಿದರು.
ವಿಎನ್‌ಆರ್೨೯ಕೆಟಿಆರ್೨: ಕೊಟ್ಟೂರು ಸರಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ೧೦೦ ಹಾಸಿಗೆ ಆಸ್ಪತ್ರೆ ನಿರ್ಮಾಣ ಕುರಿತು ನಕ್ಷೆ ಪರಿಶೀಲಿಸಿ ಲೋಕೋಪಯೋಗಿ ಇಲಾಖೆ ಅಧಿಕಾರಿಯಿಂದ ಮಾಹಿತಿ ಪಡೆದರು.
ರಸ್ತೆ, ಕುಡಿವ ನೀರಿನ ಸಮಸ್ಯೆ ಬಗೆಹರಿಸಲು ಸೂಚಿಸುವೆ
ವಿಎನ್‌ಆರ್೨೯ಕೆಟಿಅರ್೨
ಕೊಟ್ಟೂರು ಜಿಲ್ಲೆಯ ಎಲ್ಲಾ ತಾಲೂಕುಗಳ ಸಮಗ್ರ ಅಭಿವೃದ್ಧಿ ಕುರಿತು ಮಾಹಿತಿ ಪಡೆಯಲು ಮತ್ತು ಅವಶ್ಯವಿರುವ ಅನುದಾನ ಕಲ್ಪಿಸುವ ಬಗ್ಗೆ ಯೋಜನೆ ರೂಪಿಸಲು ಪ್ರತಿ ತಾಲೂಕು ಕೇಂದ್ರಗಳಿಗೆ ಭೇಟಿ ನೀಡುತ್ತಿರುವೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಂಗಳವಾರ ಮಾತನಾಡಿದರು. ಕಂದಾಯ ಇಲಾಖೆಗೆ ಹೊಸದಾಗಿ ನೇಮಕಗೊಂಡ ಗ್ರಾಮ ಲೆಕ್ಕಾಧಿಕಾರಿಗಳಿಗೆ ಕೆಲಸ ನಿರ್ವಹಣೆ ಬಗ್ಗೆ ಅರಿವಿನ ಕೊರತೆ ಇರುತ್ತದೆ. ಈ ಹಿನ್ನಲೆಯಲ್ಲಿ ಅವರಿಗೆ ಸೂಕ್ತ ತರಬೇತಿ ನೀಡಲಾಗುವುದು. ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಡಿಎಂಎಫ್‌ನಿಂದ ಈ ಹಿಂದೆ ಬಿಡುಗಡೆಯಾದ ಅನುದಾನದಲ್ಲಿ ಸಮರ್ಪಕ ಕಾಮಗಾರಿಯಾಗಿರುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲದೇ ತಾಲೂಕುಗಳ ಅಭಿವೃದ್ಧಿಗೆ ಡಿಎಂಎಫ್ ಅಡಿ ಅನುದಾನ ಲಭ್ಯವಿದ್ದು, ಅವಶ್ಯವಿರುವ ಯೋಜನೆಗೆ ಬಳಸಲಾಗುವುದು ಎಂದರು.

ಕೊಟ್ಟೂರು ಪಟ್ಟಣಕ್ಕೆ ಬರುವ ಮೊದಲಿಗೆ ಇಲ್ಲನ ಎಲ್ಲ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡಿದ್ದೇನೆ. ಕೊಟ್ಟೂರು ಪಟ್ಟಣದಲ್ಲಿ ರಾಜ್ಯ ಹೆದ್ದಾರಿ ರಸ್ತೆ ಪೂರ್ಣ ಹಾಳಾಗಿರುವುದನ್ನೂ ಗಮನಿಸಿದ್ದೇನೆ. ರಸ್ತೆ ಇಷ್ಟೊಂದು ಅದ್ವಾನವಾಗಿದ್ದರೂ ಕಾಮಗಾರಿ ಕೈಗೊಳ್ಳದ ಕುರಿತು ಅಸಮಾಧಾನವಿದ್ದು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಕಾಮಗಾರಿ ಕೈಗೊಳ್ಳಲು ಸೂಚಿಸುತ್ತೇನೆ. ಪಟ್ಟಣದಲ್ಲಿ ಕಳೆದ ನಾಲ್ಕು ವರ್ಷಗಳಿಂದ ೨೪/೭ ಕುಡಿವ ನೀರು ಯೊಜನೆ ನಡೆಯುತ್ತಿದ್ದರೂ ಪೂರ್ಣಗೊಂಡಿಲ್ಲದಿರುವುದು, ಪೈಪ್ ಲೈನ್‌ಗೆ ರಸ್ತೆ ಅಗೆದು ಬಿಟ್ಟಿರುವುದು ಮತ್ತು ಪಟ್ಟಣಕ್ಕೆ ೧೦ದಿನಕ್ಕೊಮ್ಮೆ ತುಂಗಭದ್ರ ನದಿ ನೀರು ಸರಬರಾಜು ಆಗುತ್ತಿರುವುದನ್ನು ಗಮನಕ್ಕೆ ತಂದಾಗ ಆಶ್ಚರ್ಯ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ತಕ್ಷಣವೇ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧಿಕಾರಿಗಳು ಕರೆ ಮಾಡಿ, ೨೪/೭ ಯೋಜನೆ ಗುತ್ತಿಗೆದಾರರನ್ನು ಕರೆಸುವಂತೆ ಸೂಚಿಸಿದರು. ಪ.ಪಂ.ಮುಖ್ಯಾಧಿಕಾರಿಯನ್ನು ಜಿಲ್ಲಾ ಕಚೇರಿಗೆ ಕರೆಸಿಕೊಂಡು ನೀರು ಸರಬರಾಜು ಕುರಿತು ಚರ್ಚೆ ನಡೆಸಿ ಅವ್ಯವಸ್ಥೆ ಸರಿಪಡಿಸುವುದಾಗಿ ಹೇಳಿದರು. ತಹಸೀಲ್ದಾರ ಎಂ.ಕುಮಾರಸ್ವಾಮಿ ಇದ್ದರು.