ಡೈಲಿ ವಾರ್ತೆ: 10 ಡಿಸೆಂಬರ್ 2022

400 ಅಡಿ ಆಳದ ಕೊಳವೆ ಬಾವಿಯಲ್ಲಿ ಸಿಲುಕ್ಕಿದ್ದ 8 ವರ್ಷದ ಬಾಲಕ ಮೃತ್ಯು!

ಮಧ್ಯ ಪ್ರದೇಶ: ಗದ್ದೆಯಲ್ಲಿ ಆಡುವಾಗ 400 ಅಡಿ ಅಳದ ಕೊಳವೆ ಬಾವಿಗೆ ಬಿದ್ದಿದ್ದ 8 ವರ್ಷದ ಬಾಲಕ ತನ್ಮಯ್‌ ಸಾಹು ಕೊನೆಗೂ ಬದುಕಿ ಬರಲಿಲ್ಲ. ಶನಿವಾರ (ಡಿ.10 ರಂದು) ರಕ್ಷಣಾ ಸಿಬ್ಬಂದಿಗಳು ತನ್ಮಯ್‌ ನನ್ನು ಹೊರ ತೆಗೆದಿದ್ದಾರೆ.

ಡಿ.6 ರಂದು ಮಧ್ಯ ಪ್ರದೇಶದ ಬೆತುಲ್ ಜಿಲ್ಲೆ ಮಾಂಡವಿ ಗ್ರಾಮದಲ್ಲಿ ಗದ್ದೆ ಬದಿ ಆಡುತ್ತಿದ್ದ ತನ್ಮಯ್‌ ಸಾಹು 400 ಅಡಿ ಆಳ ಕೊಳವೆ ಬಾವಿಗೆ ಬಿದ್ದು, 55 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದ. ಇದಾದ ಕೆಲವೇ ಗಂಟೆಗಳಲ್ಲಿ ರಕ್ಷಣಾ ಕಾರ್ಯಚರಣೆ ಆರಂಭಿಸಲಾಗಿತ್ತು.

55 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದ ಬಾಲಕನನ್ನು ಶನಿವಾರ ಹೊರಕ್ಕೆ ತೆಗೆಯಲಾಗಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಆದಾಗಲೇ ಮಗು ಉಸಿರು ಚೆಲ್ಲಿದೆ ಎಂದಿದ್ದಾರೆ. ಸತತ 4 ದಿನ ಗಳ ಕಾಲ ಕಾರ್ಯಚರಣೆ ನಡೆಸಿದರೂ ಬಾಲಕ ಬದುಕಿ ಬರಲಿಲ್ಲ.

ಮಗನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ನನ್ನ ಮಗನನ್ನು ಉಳಿಸಿಕೊಡಿ ಎಂದು ಆಳುತ್ತಾ ಅಧಿಕಾರಿಯ ಮುಂದೆ ಕೂತ ತಾಯಿಯ ಸ್ಥಿತಿ ಮನಕಲಕುವಂತಿತ್ತು.