ಡೈಲಿ ವಾರ್ತೆ:18 ಜನವರಿ 2023

ಬೆಂಗಳೂರು ಅಮಾನವೀಯ ಘಟನೆ: ವೃದ್ಧನನ್ನು ಒಂದು ಕಿ.ಮೀ. ದೂರ ರಸ್ತೆಯಲ್ಲಿ ಎಳೆದೊಯ್ದ ಸ್ಕೂಟರ್ ಸವಾರ! (ಘಟನೆ ವಿಡಿಯೋ ವೀಕ್ಷಿಸಿ)

ಬೆಂಗಳೂರು:71 ವರ್ಷ ವೃದ್ಧರೊಬ್ಬರನ್ನು ಸ್ಕೂಟರ್ ನಲ್ಲಿ ಒಂದು ಕಿ.ಮೀ.ದೂರ ಎಳೆದುಕೊಂಡು ಹೋದ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಸ್ಕೂಟರ್ ಸವಾರನ ವಿರುದ್ಧ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ.

ಒನ್ ವೇ ನಲ್ಲಿ ಬಂದು ನಿಂತಿದ್ದ ಬೊಲೆರೋಗೆ ಡಿಕ್ಕಿ ಹೊಡೆದು, ಅದನ್ನು ಪ್ರಶ್ನಿಸಲು ಸ್ಕೂಟರ್ ಹಿಡಿದ ವೃದ್ಧ ಚಾಲಕನನ್ನು ಸ್ಕೂಟರ್ ಸವಾರ ಸೊಹೈಲ್ ಎಂಬಾತ ಸ್ಕೂಟರ್ ನಲ್ಲಿ ಒಂದು ಕಿ.ಮೀ. ದೂರ ಎಳೆದೊಯ್ದು ಅಮಾನವೀಯತೆ ಮೆರೆದಿದ್ದ.

ಇದೀಗ ಸೊಹೈಲ್ ವಿರುದ್ಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ ಐಆರ್ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿರುವ ಬೆನ್ನಲ್ಲೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮಾಗಡಿ ರಸ್ತೆ ಟೋಲ್ ಗೇಟ್ ಬಳಿ ಈ ಕೃತ್ಯ ನಡೆದಿದ್ದು, ಕುವೆಂಪು ಭಾಷಾಭಾರತಿ ಪ್ರಾಧಿಕಾರಕ್ಕೆ ತೆರಳುತ್ತಿದ್ದ ಬೊಲೆರೋ ಚಾಲಕ 71 ವರ್ಷದ ಮುತ್ತಪ್ಪ ಅವರ ವಾಹನಕ್ಕೆ ಹೋಂಡಾ ಆಕ್ಟಿವಾದಲ್ಲಿ ಬಂದ ದ್ವಿಚಕ್ರ ಸವಾರ ಸೊಹೈಲ್ ಡಿಕ್ಕಿ ಹೊಡೆಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

ಈ ವೇಳೆ ಸೊಹೈಲ್ ಸ್ಥಳದಿಂದ ಪರಾರಿಯಾಗಲು ಯತ್ನಿಸಿದಾಗ ಮುತ್ತಪ್ಪ ಅವರು ಆತನ ಸ್ಕೂಟರ್ ನ ಹಿಂದೆ ಹಿಡಿದುಕೊಂಡಿದ್ದಾರೆ. ಇದನ್ನು ನೋಡಿಯೂ ಸೊಹೈಲ್ ಮುತ್ತಪ್ಪ ಅವರನ್ನು ಒಂದು ಕಿಲೋ ಮೀಟರ್ ದೂರ ವೃದ್ಧ ಎಂದೂ ನೋಡದೇ ಅಮಾನವೀಯವಾಗಿ ಎಳೆದೊಯ್ದಿದ್ದಾನೆ. ಘಟನೆ ವಿರುದ್ಧ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.