

ಡೈಲಿ ವಾರ್ತೆ: ಫೆ./05/2026
ಪರವಾನಿಗೆ ಇಲ್ಲದೇ ಅಕ್ರಮ ಸ್ಪೋಟಕ ಬಳಕೆ: ಕುಕ್ಕುಂದೂರಿನಲ್ಲಿ ತಂದೆ, ಮಗನ ಬಂಧನ

ಕಾರ್ಕಳ: ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ನಕ್ರೆ ಹಾಂಕ್ರಾಡಿ ಪ್ರದೇಶದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಸ್ಪೋಟಕಗಳನ್ನು ಬಳಸಿ ಕಲ್ಲು ಬಂಡೆಗಳನ್ನು ಒಡೆದ ಘಟನೆಗೆ ಸಂಬಂಧಿಸಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತರಾದ ತಂದೆ ಮತ್ತು ಮಗನನ್ನು ಪೊಲೀಸರು ಬಂಧಿಸಿದ್ದಾರೆ.
ದಿನಾಂಕ 21.01.2026 ರಂದು ಸಂಜೆ ಆರೋಪಿತರಾದ
ಅಯ್ಯಪ್ಪ ನಗರ, ಕುಕ್ಕುಂದೂರು ಗ್ರಾಮದ
ಟಿ. ರವಿಚಂದ್ರ (55) ಹಾಗೂ ಅವರ ಪುತ್ರ ಪವನ್ ಕುಮಾರ್ (31) ಇವರು ಯಾವುದೇ ಕಾನೂನು ಪರವಾನಿಗೆ ಹೊಂದದೇ ಸ್ಪೋಟಕಗಳನ್ನು ಬಳಸಿ ಕಲ್ಲು ಬಂಡೆಗಳನ್ನು ಒಡೆದಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 13/2026 ಅಡಿಯಲ್ಲಿ Explosive Act 1884 ರ ಕಲಂ 9(B)1(b), Explosive Substances Act 1908 ರ ಕಲಂ 5, ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂಗಳು 287 ಮತ್ತು 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ತನಿಖೆಯನ್ನು ಕೈಗೊಂಡ ಕಾರ್ಕಳ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಮುರುಳೀಧರ ನಾಯ್ಕ ಹಾಗೂ ಸಿಬ್ಬಂದಿಯವರು ಆರೋಪಿತರನ್ನು 05/02/2026 ರಂದು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿತರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.