ಡೈಲಿ ವಾರ್ತೆ: ಫೆ./05/2026

ಮಣಿಪಾಲದಲ್ಲಿ ಕಳ್ಳರ ಕೈಚಳಕ: ಮನೆ ಬೀಗ ಮುರಿದು ₹7 ಲಕ್ಷ ಚಿನ್ನಾಭರಣ ಕಳವು

ಮಣಿಪಾಲ: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಳ್ಳಿ ಗ್ರಾಮದಲ್ಲಿ ಮನೆಯ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಶಿವಳ್ಳಿ ಗ್ರಾಮದ ಅಮಿತಾ ಡ್ಯಾನಿಯಲ್ ಕರ್ಕಡ ಇವರು ಫೆ. 3 ರಂದು ಮಧ್ಯಾಹ್ನ 01.45 ಗಂಟೆಗೆ ಮನೆಯ ಬಾಗಿಲು ಹಾಗೂ ಹೊರಗಿನ ಗೇಟಿಗೆ ಬೀಗ ಹಾಕಿ ತಾಯಿ ಮನೆಗೆ ತೆರಳಿದ್ದರು. ನಂತರ ದಿನಾಂಕ 04/02/2026 ರಂದು ಮಧ್ಯಾಹ್ನ 01.30 ಗಂಟೆಗೆ ಮನೆಯ ಬಾಗಿಲು ತೆರೆದಿರುವುದಾಗಿ ಪಕ್ಕದ ಮನೆಯವರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪಿರ್ಯಾದಿದಾರರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.


ಪರಿಶೀಲನೆ ವೇಳೆ, ದಿನಾಂಕ 03/02/2026 ರಂದು ಮಧ್ಯಾಹ್ನ 03.45 ಗಂಟೆಯಿಂದ 04/02/2026 ರಂದು ಮಧ್ಯಾಹ್ನ 02.00 ಗಂಟೆಯ ನಡುವಿನ ಅವಧಿಯಲ್ಲಿ ಅಜ್ಞಾತ ಕಳ್ಳರು ಮನೆಯೊಳಗೆ ಪ್ರವೇಶಿಸಿ ಸುಮಾರು 75 ಗ್ರಾಂ ತೂಕದ, ಅಂದಾಜು ₹7 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದು ತಿಳಿದುಬಂದಿದೆ.
ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 15/2026 ಅಡಿ BNS ಕಲಂ 331(3), 331(4) ಮತ್ತು 305ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.