

ಡೈಲಿ ವಾರ್ತೆ: ಫೆ./05/2026
ಅಮಾಸೆಬೈಲು| ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ: ರಿಕ್ಷಾ ಚಾಲಕ ಸೇರಿ ಇಬ್ಬರಿಗೆ 5 ವರ್ಷ ಜೈಲು ಶಿಕ್ಷೆ

ಕುಂದಾಪುರ, ಫೆ.05: ಕುಂದಾಪುರ ತಾಲೂಕಿನ ಅಮಾಸೆಬೈಲು ಶಾಲೆಗೆ ಹೋಗುತ್ತಿದ್ದ ಪರಿಶಿಷ್ಟ ಜಾತಿಗೆ ಸೇರಿದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣದಲ್ಲಿ, ರಿಕ್ಷಾ ಚಾಲಕ ಶರತ್ ಶೆಟ್ಟಿ ಹಾಗೂ ಆತನ ಸ್ನೇಹಿತ ಪ್ರಶಾಂತ್ ನಾಯ್ಕ್ ಅವರಿಗೆ ಮಾನ್ಯ ನ್ಯಾಯಾಲಯವು ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ತಲಾ ₹5,000 ದಂಡ ವಿಧಿಸಿ ಆದೇಶ ಹೊರಡಿಸಿದೆ.
ಶಾಲೆಗೆ ಹೋಗಿ ಬರುವ ವೇಳೆ ಬಾಲಕಿಯನ್ನು ನಿಯಮಿತವಾಗಿ ರಿಕ್ಷಾದಲ್ಲಿ ಕರೆದುಕೊಂಡು ಹೋಗುತ್ತಿದ್ದ ಶರತ್ ಶೆಟ್ಟಿ ಮತ್ತು ಆತನ ಸ್ನೇಹಿತ ಪ್ರಶಾಂತ್ ನಾಯ್ಕ್ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ನೊಂದ ಬಾಲಕಿ ಶಾಲಾ ಅಧ್ಯಾಪಕರಿಗೆ ಮಾಹಿತಿ ನೀಡಿದ್ದಳು. ಈ ಕುರಿತು ದಿನಾಂಕ 15-07-2025ರಂದು ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 24/2025 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ–2023, ಪೋಕ್ಸೋ ಕಾಯ್ದೆ ಹಾಗೂ ಎಸ್‌ಸಿ/ಎಸ್‌ಟಿ (ಪೀಡನೆ ತಡೆ) ಕಾಯ್ದೆಯ ವಿವಿಧ ಕಲಂಗಳು ಅನ್ವಯ ಪ್ರಕರಣ ದಾಖಲಾಗಿತ್ತು.
ಕುಂದಾಪುರ ಡಿವೈ.ಎಸ್.ಪಿ ಹೆಚ್.ಡಿ. ಕುಲಕರ್ಣಿ ಅವರ ನೇತೃತ್ವದಲ್ಲಿ ನಡೆದ ತನಿಖೆಯನ್ನು 15 ದಿನಗಳಲ್ಲಿ ಪೂರ್ಣಗೊಳಿಸಿ, ಆರೋಪಿತರ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಉಡುಪಿಯ ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ–FTSC-1 (ಪೋಕ್ಸೋ ನ್ಯಾಯಾಲಯ)ಕ್ಕೆ ಸಲ್ಲಿಸಲಾಗಿತ್ತು.
ನ್ಯಾಯಾಲಯವು ಪ್ರಕರಣವನ್ನು ಎಸ್.ಸಿ.ನಂ. 67/2025ರಲ್ಲಿ ಸ್ವೀಕರಿಸಿಕೊಂಡು ತ್ವರಿತ ವಿಚಾರಣೆ ನಡೆಸಿ, ದಿನಾಂಕ 05-02-2026ರಂದು ಆರೋಪಿತರು ತಪ್ಪಿತಸ್ಥರೆಂದು ತೀರ್ಪು ನೀಡಿ ಶಿಕ್ಷೆ ವಿಧಿಸಿದೆ.
ನ್ಯಾಯಾಲಯದಲ್ಲಿ ನೊಂದ ಬಾಲಕಿಯ ಪರವಾಗಿ ಸರಕಾರಿ ಅಭಿಯೋಜಕರಾದ ಶ್ರೀ ಪ್ರಕಾಶ್ ಚಂದ್ರ ಶೆಟ್ಟಿ, ಶ್ರೀ ಜಯರಾಮ ಶೆಟ್ಟಿ ಹಾಗೂ ಶ್ರೀ ವೈ.ಟಿ. ರಾಘವೇಂದ್ರ ಅವರು ವಾದ ಮಂಡಿಸಿದರು.