ಡೈಲಿ ವಾರ್ತೆ: 26 ಜನವರಿ 2023

ಸಂಪಾದಕರು: ಇಬ್ರಾಹಿಂ ಕೋಟ

ಕುಂದಾಪುರ ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯಿಂದ 74ನೇ ಗಣರಾಜ್ಯೋತ್ಸವ ಆಚರಣೆ:
ದೇಶ ನಮಗೇನು ಕೊಟ್ಟಿದೆ ಎನ್ನುವ ಮೊದಲು ನಾವು ದೇಶಕ್ಕೆ ಏನು ಕೊಟ್ಟಿದ್ದೇವೆಂದು ಅರಿಯಬೇಕು: ನಿವೃತ್ತ ಲೆಫ್ಟಿನೆಂಟ್ ಜನರಲ್ ಮಿಯಾರು ಕೃಷ್ಣಯ್ಯ ಶೆಟ್ಟಿ

ಕುಂದಾಪುರ: ದೇಶ ನಮಗೇನು ಕೊಟ್ಟಿದೆ ಎನ್ನುವ ಮೊದಲು ನಾವು ದೇಶಕ್ಕೆ ಏನು ಕೊಟ್ಟಿದ್ದೇವೆಂದು ಅರಿಯಬೇಕು. ನಾವು ದೇಶಕ್ಕಾಗಿ ಕೊಡಬಹುದಾದ ಯಾವುದೇ ಸೇವೆ ಮುಖ್ಯವಾಗುತ್ತದೆ. ದೇಶ ಸೇವೆ ಎಂದರೆ ಕೇವಲ ಸೈನ್ಯದಲ್ಲಿರುವುದು ಮಾತ್ರವಲ್ಲ. ಬದಲಾಗಿ ಎಲ್ಲ ರೀತಿಯಲ್ಲೂ ಸೇವೆ ಮಾಡಬಹುದು. ವಿದ್ಯಾರ್ಥಿಗಳಲ್ಲಿ ಒಂದು ಛಲ ಹಾಗೂ ಗುರಿ ಇರಬೇಕು. ಇದರಿಂದ ಮುಂದೆ ನಿರೀಕ್ಷಿತ ಗುರಿ ತಲುಪಲು ಸಾಧ್ಯ ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ಮಿಯಾರು ಕೃಷ್ಣಯ್ಯ ಶೆಟ್ಟಿ ಹೇಳಿದರು.

ಕುಂದಾಪುರ ಕೋಡಿಯ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ 74ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ‌ದ ಬಳಿಕ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು.

ಭಾರತೀಯ ಸೇನೆಯಲ್ಲಿ ಯಾವುದೇ ಜಾತಿ ಮತ ಧರ್ಮವಿಲ್ಲ. ಬದಲಾದಗಿ ಎಲ್ಲರೂ ಸಹೋದರರಂತಿರುತ್ತೇವೆ. ಭಾರತೀಯ ಸೇನೆಯು ಧಾರ್ಮಿಕತೆಯಲ್ಲಿ ಸರ್ವ ಧರ್ಮ ಸ್ಥಳ. ಒಂದೇ ಕಟ್ಟಡದಲ್ಲಿ ದೇವಸ್ಥಾನ, ಮಸೀದಿ, ಚರ್ಚ್ ಹಾಗೂ ಗುರುದ್ವಾರವಿದ್ದು ಈ ಪ್ರಮುಖ ನಾಲ್ಕು ಧಾರ್ಮಿಕ ಆಲೆಯಗಳು ಒಂದೇ ಸೂರಿನಡಿಯಲ್ಲಿ ಕೆಲಸ ಮಾಡುತ್ತದೆ. ಯಾವುದೇ ಧರ್ಮದ ಆಚರಣೆ ಬಂದರೆ ನಮ್ಮ ಸೈನ್ಯದಲ್ಲಿ ಒಟ್ಟಿಗೆ ಆಚರಿಸುವ ಪದ್ಧತಿ ನಮ್ಮ ಭಾರತೀಯ ಸೈನ್ಯದಲಿದೆ ಎಂದ ಅವರು ಭಾರತೀಯ ಸೈನ್ಯದಲ್ಲಿ ಮೂರು ಅಂಗವಿದ್ದು ಭೂಸೇನೆ, ನೌಕಾ ಸೇನೆ ಹಾಗೂ ವಾಯು ಸೇನೆ ಇದು ಮೂರು ಒಟ್ಟಿಗೆ ಭಾರತೀಯ ಸೇನೆ ಎಂದು ಕರೆಯಲಾಗುತ್ತದೆ. ಸೈನ್ಯಕ್ಕೆ ಸೇರುವಾಗ ಯುದ್ಧದ್ದಲ್ಲಿ ಒಂದು ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ ಬರುತ್ತೇವೆ. ಒಂದು ವೇಳೆ ಸಾಧ್ಯ ಆಗದಿದ್ದರೆ ಅದರಲ್ಲಿ ಸುತ್ತಿಕೊಂಡು ಬರುತ್ತೇವೆ ಎಂಬ ಪ್ರತಿಜ್ಞೆ ಮಾಡುತ್ತೇವೆ ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.



ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ‌ ಸಂಚಾಲಕ ಸೈಯದ್ ಮಹಮ್ಮದ್ ಬ್ಯಾರಿ ಮಾತನಾಡಿ, ದೇಶ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುವ ಸೈನಿಕರು ನಮ್ಮ‌ಹೆಮ್ಮೆ. ವಿದ್ಯಾರ್ಥಿಗಳು ಎಳವಿನಲ್ಲಿಯೇ ಶಿಸ್ತು‌ ಬೆಳೆಸಿಕೊಳ್ಳಬೇಕು ಹಾಗೂ ದೇಶಪ್ರೇಮವಿರಬೇಕು ಎಂದರು.



ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ರೆಹಮಾನ್ ಬ್ಯಾರಿ, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳು ಮತ್ತು ವಿವಿಧ ಅಂಗ ಸಂಸ್ಥೆಗಳ ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರು ಮತ್ತು ಸದಸ್ಯರು ಊರಿನ ಪ್ರಮುಖರು ವೇದಿಕೆಯಲ್ಲಿದ್ದರು.



ಉಪನ್ಯಾಸಕರು ಕೋಡಿ ಬ್ಯಾರೀಸ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಸಂದೀಪ್ ಶೆಟ್ಟಿ ನಿರೂಪಿಸಿದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು, ಊರಿನ ನಾಗರಿಕರು, ತ್ರಿವರ್ಣ ಧ್ವಜ ಹಿಡಿದು ಸಾಮೂಹಿಕ ಕವಾಯತು ಮಾಡುವುದರ ಮೂಲಕ ದೇಶ ಭಕ್ತಿಗೀತೆಗಳನ್ನು ಹಾಡಿದರು. ಬಳಿಕ ಕೋಡಿ ಸೀ ವಾಕ್ ನಲ್ಲಿ ರಾಷ್ಟ್ರಧ್ವಜವನ್ನು ಹಿಡಿದು ಸುಮಾರು 1200 ವಿದ್ಯಾರ್ಥಿಗಳು ಕವಾಯತು ಮಾಡುವುದರ ಮೂಲಕ 74ನೇ ವರ್ಷದ ಗಣರಾಜ್ಯೋತ್ಸವ ವಿಶಿಷ್ಟವಾಗಿ ಆಚರಿಸಿದರು.