ಡೈಲಿ ವಾರ್ತೆ: 26 ಜನವರಿ 2023
ವರದಿ: ಅದ್ದಿ ಬೊಳ್ಳೂರು
ಜ. 31 ರಿಂದ ಫೆ. 4 ರ ತನಕ ಹಳೆಯಂಗಡಿ ಬೊಳ್ಳೂರಿನಲ್ಲಿ 40ನೇ ವಾರ್ಷಿಕ ರಿಫಾಯಿ ದಫ್ ರಾತೀಬ್ ನೇರ್ಚೆ, ಧಾರ್ಮಿಕ ಕಾರ್ಯಕ್ರಮ
ಹಳೆಯಂಗಡಿ: ಮುಹಿಯ್ಯುದ್ದೀನ್ ಜುಮ್ಮಾ ಮಸ್ಟಿದ್(ರಿ) ಬೊಳ್ಳೂರು, ಹಳೆಯಂಗಡಿ ಇದರ ಆದೀನದಲ್ಲಿರುವ ಲಿಯಾವುಲ್ ಇಸ್ಲಾಮ್ ದಫ್ ಕಮಿಟಿ ಸಮಿತಿಯ ವತಿಯಿಂದ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ 40ನೇ ವಾರ್ಷಿಕ ರಿಫಾಯಿ ದಫ್ ರಾತೀಬ್ ನೇರ್ಚೆ ಹಾಗು ಪ್ರಸಿದ್ಧ ಉಲಮಾಗಳಿಂದ ಧಾರ್ಮಿಕ ಮತ ಪ್ರವಚನ ಮತ್ತು ಕಥಾ ಪ್ರಸಂಗ ಕಾರ್ಯಕ್ರಮವು ದಿನಾಂಕ ಜನವರಿ 31 ರಿಂದ ಫೆಬ್ರವರಿ 4ನೇ ತಾರೀಕಿನವರೆಗೆ ನಡೆಯಲಿದೆ ಎಂದು ಕಮಿಟಿಯ ಪ್ರಧಾನ ಕಾರ್ಯದರ್ಶಿ ಹುಸೆನಬ್ಬ ಬೊಳ್ಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಗಳವಾರ ಅಸರ್ ನಮಾಝಿನ ನಂತರ ಖತೀಬರಾದ ಬೊಳ್ಳೂರು ಉಸ್ತಾದ್ ಮುಹಮ್ಮದ್ ಅಝ್ಹರ್ ಫೈಝಿ ಅವರ ನೇತೃತ್ವದಲ್ಲಿ ಧ್ವಜಾರೋಹಣ ಹಾಗೂ ಮೌಲೀದ್ ಪಾರಾಯಣ ನಡೆಯಲಿದೆ. ಕೇರಳ ಮನ್ನಾರ್‌ಕಾಡ್ ಸುಪ್ರಸಿದ್ಧ ಗಾದಿಗನ್ ಉಸ್ತಾದ್ ಸಿ.ಕೆ.ಯಸ್ ಮೌಲವಿ ಮತ್ತು ಬಳಗದವರಿಂದ ಫೆಬ್ರವರಿ 1 ರಿಂದ ರಾತ್ರಿ 3 ದಿವಸಗಳ ಕಾಲ “ಮಿಸಿರಿಲೇ ಮಾನಿಕ್ಯಂ” ಇಸ್ಲಾಮಿಕ್ ಧಾರ್ಮಿಕ ಕಥಾ ಪ್ರಸಂಗ ನಡೆಯಲಿದೆ.
ಫೆಬ್ರವರಿ 4ರಂದು ಶನಿವಾರ ಅಪರಾಹ್ನ 2 ಗಂಟೆಗೆ ಬೊಳ್ಳೂರು ಉಸ್ತಾದ್ ಮುಹಮ್ಮದ್ ಅಝ್ಹರ್ ಫೈಝಿಯವರು ಮಜ್ಲೀಸ್ ಉದ್ಘಾಟಿಸಲಿದ್ದಾರೆ, ಪ್ರಧಾನ ದಫ್ ಉಸ್ತಾದ್ ಹಾಜಿ ಪಿ. ಇಸ್ಮಾಯಿಲ್ ಮುಸ್ಲಿಯಾರ್ ಬೆಳ್ಳಾರೆ ಸುಳ್ಯ, ಕೆ. ಎಚ್. ಹಸನ್ ಮುಸ್ಲಿಯಾರ್, ಹಾಜಿ ಪಂಡಿತ್ ಬಿ.ಎ. ಇದ್ದಿನಬ್ಬ, ತೋಡಾರು ಇವರುಗಳ ನೇತೃತ್ವದಲ್ಲಿ “ರಿಫಾಯಿ ದಫ್ ರಾತೀಬ್ ಮಜ್ಲೀಸ್” ನಡೆಯಲಿದೆ.
ಶನಿವಾರ ರಾತ್ರಿ ನಡೆಯಲಿರುವ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡರು, ಸ್ಥಳೀಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ವಿವಿಧ ಗಣ್ಯರು ವೇದಿಕೆಯಲ್ಲಿ ಭಾಗವಹಿಸಲಿದ್ದಾರೆ.
ಕೇರಳದ ಪ್ರಸಿದ್ಧ ತಂಙಲ್ ಬಹು| ಸಯ್ಯದ್ ತ್ವಾಹಾ ಜಿಫ್ರಿ ಅಲಪುಝಾ ಅವರು ದುವಾ-ಆಶಿರ್ವಚನ ನೀಡಲಿದ್ದಾರೆ, ಬಳಿಕ ಅನ್ನದಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.