ಡೈಲಿ ವಾರ್ತೆ:03 ಫೆಬ್ರವರಿ 2023
‘ಕಲಾ ತಪಸ್ವಿ’ ಬಿರುದಾಂಕಿತ ಹೆಸರಾಂತ ನಿರ್ದೇಶಕ, ಪದ್ಮಶ್ರೀ ಪುರಸ್ಕೃತ ಕೆ. ವಿಶ್ವನಾಥನ್ ಇನ್ನಿಲ್ಲ!
ಹೈದರಾಬಾದ್: ತೆಲುಗು ಚಿತ್ರರಂಗದ ದಿಗ್ಗಜ, ಹೆಸರಾಂತ ನಿರ್ದೇಶಕ ಕೆ ವಿಶ್ವನಾಥ್ (92) ಅವರು ವಯೋಸಹಜ ಅನಾರೋಗ್ಯದಿಂದ ಗುರುವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. ಟಾಲಿವುಡ್ ಸಿನಿರಂಗದಲ್ಲಿ ‘ಕಲಾ ತಪಸ್ವಿ’ ಎಂದೇ ಬಿರುದಾಂಕಿತರಾಗಿದ್ದ ನಿರ್ದೇಶಕ ಕಾಶಿನಾಥುನಿ ವಿಶ್ವನಾಥ್ ಅವರು ಕಳೆದ ಕೆಲ ಸಮಯದಿಂದ ವಯೋಸಹಜ ಕಾರಣದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಇತ್ತೀಚೆಗೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗುರುವಾರ ರಾತ್ರಿ ಆರೋಗ್ಯದಲ್ಲಿ ಗಂಭೀರಗೊಂಡ ಕಾರಣ ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದ್ದಾರೆ.
ಸಿನಿಮಾ ಕ್ಷೇತ್ರದಲ್ಲಿ ಅನನ್ಯ ಸಾಧನೆಯನ್ನು ಪರಿಗಣಿಸಿ 2017 ರಲ್ಲಿ ಅತ್ಯುನ್ನತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೂ ಭಾಜನರಾಗಿದ್ದ ಕೆ ವಿಶ್ವನಾಥ್, ಈ ವರೆಗೆ ಒಟ್ಟು 5 ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದರು.
ಸ್ವಾತಿ ಮುತ್ಯಂ, ಸಾಗರ ಸಂಗಮಂ, ಶಂಕರಾಭರಣಂ, ಸಪ್ತಪದಿ, ಸಿರಿವೆನ್ನೆಲ, ಶುಭಲೇಖ, ಶ್ರುತಿಲಯಲು ಸೇರಿದಂತೆ ಹತ್ತು ಹಲವು ಅತ್ಯದ್ಭುತ ತೆಲುಗು ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ಕೆ ವಿಶ್ವನಾಥ್, ಹಿಂದಿ ಭಾಷೆಯಲ್ಲೂ ಈಶ್ವರ್, ಸಂಜೋಗ್, ಸುರ ಸಂಗಮ್ ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ದೇಶಿಸಿದ್ದರು. ಸ್ವರಾಭಿಷೇಕಂ, ಅತಡು, ಠಾಗೂರ್ ಸೇರಿದಂತೆ ಇನ್ನೂ ಹಲವು ಚಿತ್ರಗಳಲ್ಲಿ ನಟಿಸಿದ್ದ ಅವರು, ನಿರ್ದೇಶಕರಾಗಿ, ನಟರಾಗಿ, ಚಿತ್ರಕಥೆಗಾರರಾಗಿಯೂ ತನ್ನದೇ ಆದ ಛಾಪು ಮೂಡಿಸಿ ತೆಲುಗು ಚಿತ್ರರಂಗದಲ್ಲಿ ಕಲಾ ತಪಸ್ವಿ ಎಂದೇ ಹೆಸರಾಂತರಾಗಿದ್ದರು.