ಡೈಲಿವಾರ್ತೆ:17/ಮಾರ್ಚ್/2026

ಶ್ರೀ ಲಕ್ಷ್ಮೀ ಎಕ್ಸ್‌ಪ್ರೆಸ್ ಮಾಲಕ ವಿಠಲ ಶೆಟ್ಟಿ ನಿಧನ: ದಿಢೀರ್ ಬಸ್ ಸ್ಥಗಿತದಿಂದ ಸಾರ್ವಜನಿಕರಿಗೆ ತೊಂದರೆ

ಕುಂದಾಪುರ: ತಾಲೂಕಿನ ವಕ್ವಾಡಿ ದ್ಯಾಗಳಮನೆ ಮೂಲದ ಹಾಗೂ ಪ್ರಸ್ತುತ ಮಂದಾರ್ತಿ ಹೆಗ್ಗುಂಜೆ ನಿಡೂರು ನಿವಾಸಿಯಾಗಿದ್ದ ಶ್ರೀ ಲಕ್ಷ್ಮೀ ಎಕ್ಸ್‌ಪ್ರೆಸ್ ಬಸ್‌ಗಳ ಮಾಲಕ ವಿಠಲ ಶೆಟ್ಟಿ (96) ಅವರು ಮಂದಾರ್ತಿ ನಿವಾಸದಲ್ಲಿ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಆರು ಮಂದಿ ಪುತ್ರರನ್ನು ಅಗಲಿದ್ದಾರೆ.
ವಿಠಲ ಶೆಟ್ಟಿಯವರ ನಿಧನ ಸುದ್ದಿ ತಿಳಿಯುತ್ತಿದ್ದಂತೆಯೇ, ಉಡುಪಿ, ಕುಂದಾಪುರ ಸೇರಿದಂತೆ ಗ್ರಾಮೀಣ ಭಾಗಗಳ 30ಕ್ಕೂ ಹೆಚ್ಚು ಬಸ್‌ಗಳನ್ನು ಚಾಲಕರು ಹಾಗೂ ನಿರ್ವಾಹಕರು ಮಂಗಳವಾರ ಸ್ಥಗಿತಗೊಳಿಸಿದರು. ಇದರಿಂದ ನೂರಾರು ಉದ್ಯೋಗಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ದೈನಂದಿನ ಪ್ರಯಾಣಿಕರು ಸಂಕಷ್ಟಕ್ಕೆ ಒಳಗಾದರು.

ಯಾವುದೇ ಮುನ್ಸೂಚನೆ ನೀಡದೇ ಬಸ್ ಸಂಚಾರ ಸ್ಥಗಿತಗೊಳಿಸಿರುವುದರಿಂದ ಪಿಯುಸಿ ಪರೀಕ್ಷೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳಿಗೂ ತೊಂದರೆ ಉಂಟಾಯಿತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪೋಷಕರು ಬಸ್ ಮಾಲಕರ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಆರ್‌ಟಿಒ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಗ್ರಾಮೀಣ ಭಾಗಕ್ಕೆ ಸಾರಿಗೆ ಸೌಲಭ್ಯ ಒದಗಿಸುವ ಉದ್ದೇಶದಿಂದ ಸುಮಾರು 35 ವರ್ಷಗಳ ಹಿಂದೆ ‘ಶ್ರೀ ಲಕ್ಷ್ಮೀ’ ಹೆಸರಿನಲ್ಲಿ ಸಾರಿಗೆ ಸಂಸ್ಥೆಯನ್ನು ವಿಠಲ ಶೆಟ್ಟಿಯವರು ಆರಂಭಿಸಿದ್ದರು. ಆರಂಭದಲ್ಲಿ ಐದು ಬಸ್‌ಗಳಿಂದ ಕಾರ್ಯಾರಂಭಗೊಂಡ ಈ ಸಂಸ್ಥೆ, ಬಳಿಕ ಅಭಿವೃದ್ಧಿ ಕಂಡು ಪುತ್ರರ ನಿರ್ವಹಣೆಯಲ್ಲಿ ಪ್ರಸ್ತುತ 32 ಬಸ್‌ಗಳೊಂದಿಗೆ ಸೇವೆ ನೀಡುತ್ತಿದೆ.

ಕುಂದಾಪುರ, ಹೆಬ್ರಿ, ಉಡುಪಿ, ಗೋಳಿಯಂಗಡಿ, ಮಂದರ್ತಿ, ಕೊಕ್ಕರ್ಣೆ, ಪೇತ್ರಿ ಸೇರಿದಂತೆ ವಿವಿಧ ಭಾಗಗಳಲ್ಲಿ ಈ ಬಸ್‌ಗಳು ಸಂಚರಿಸುತ್ತಿವೆ.

ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ವಿಠಲ ಶೆಟ್ಟಿಯವರು ದಾನಶೀಲ ವ್ಯಕ್ತಿಯಾಗಿಯೂ ಪ್ರಸಿದ್ಧರಾಗಿದ್ದರು.

ಮಂದಾರ್ತಿಯ ನಿವಾಸದಲ್ಲಿ ಮಧ್ಯಾಹ್ನದವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಬಳಿಕ ಹುಟ್ಟೂರು ವಕ್ವಾಡಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.

ಹಲವಾರು ವರ್ಷಗಳಿಂದ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಚಾಲಕರು ಮತ್ತು ನಿರ್ವಾಹಕರು ತಮ್ಮ ಉದ್ಯೋಗದಾತರ ಅಂತಿಮ ದರ್ಶನಕ್ಕಾಗಿ ಬಸ್ ಸಂಚಾರ ಸ್ಥಗಿತಗೊಳಿಸಿ ಭಾಗವಹಿಸಿದ ಹಿನ್ನೆಲೆಯಲ್ಲಿ ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಸಾರಿಗೆ ವ್ಯತ್ಯಯ ಉಂಟಾಯಿತು.

ಇದೀಗ ಮಾ.18 ಬುಧವಾರದಿಂದ ಬಸ್ ಸಂಚಾರ ಎಂದಿನಂತೆ ಪುನರಾರಂಭವಾಗಲಿದೆ ಎಂದು ಶ್ರೀ ಲಕ್ಷ್ಮೀ ಎಕ್ಸ್‌ಪ್ರೆಸ್ ಸಂಸ್ಥೆಯ ಮುಖ್ಯಸ್ಥ ಹರೀಶ್ ಶೆಟ್ಟಿ ತಿಳಿಸಿದ್ದಾರೆ.