ಡೈಲಿವಾರ್ತೆ:17/ಮಾರ್ಚ್/2026

ಶಿವಮೊಗ್ಗ: ಪೆಟ್ರೋಲ್ ಎರಚಿ ವ್ಯಕ್ತಿ ಹತ್ಯೆ ಪ್ರಕರಣ – ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಶಿವಮೊಗ್ಗ: ವ್ಯಕ್ತಿಯ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿ ಹತ್ಯೆಗೈದಿದ್ದ ಇಬ್ಬರು ಆರೋಪಿಗಳಿಗೆ ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಶಿವಮೊಗ್ಗ ತಾಲೂಕಿನ ಬೆಳಲಕಟ್ಟೆ ಗ್ರಾಮದ ಮಹೇಶಪ್ಪ ಹಾಗೂ ಆರೋಪಿಗಳಾದ ಕುಮಾರ್ (57) ಮತ್ತು ಕಾರ್ತಿಕ್ (28) ನಡುವೆ ಜಮೀನಿನ ವಿಚಾರವಾಗಿ ಹಿಂದೆಂದೂ ವೈಮನಸ್ಸು ಇತ್ತು.

ಇದೇ ದ್ವೇಷದ ಹಿನ್ನೆಲೆ 03-12-2023ರಂದು ಆರೋಪಿಗಳು ಹನಸವಾಡಿ ಸರ್ಕಲ್ ಬಳಿ ಹೊಂಚು ಹಾಕಿ ಕಾದಿದ್ದರು.
ಈ ವೇಳೆ ಸ್ಕೂಟಿಯಲ್ಲಿ ಬರುತ್ತಿದ್ದ ಮಹೇಶಪ್ಪ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕ್ರೂರವಾಗಿ ಹತ್ಯೆಗೈದಿದ್ದರು.

ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಕಲಂ 120(ಬಿ), 341, 435, 302 ಹಾಗೂ 34ರಡಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಯನ್ನು ಆಗಿನ ಪೊಲೀಸ್ ಇನ್ಸ್‌ಪೆಕ್ಟರ್ ಸತ್ಯನಾರಾಯಣ ವೈ. ಅವರು ನಡೆಸಿ, ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಡೆಸಿತು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಮಮತಾ ಬಿ.ಎಸ್ ವಾದ ಮಂಡಿಸಿದರು.
ವಿಚಾರಣೆಯ ವೇಳೆ ಆರೋಪಿತರ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಅಭಯ್ ಧನಪಾಲ್ ಚೌಗಲ ಅವರು ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಒಟ್ಟು 57,000 ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದರು.