ಡೈಲಿ ವಾರ್ತೆ:10 ಫೆಬ್ರವರಿ 2023
– ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ, ಉಡುಪಿ ಜಿಲ್ಲೆ.
ಕಾಯಕಲ್ಪ ಕಾಣದ ಕಾಜಾಡಿ ಮನೆ ರಸ್ತೆಗೆ ಡಾಂಬರೀಕರಣ ಎಂದು…? ಮಳೆಗಾಲದಲ್ಲಿ ಕೆಸರು ಗೆದ್ದೆ.., ಬೇಸಿಗೆಯಲ್ಲಿ ಧೂಳು ಮಯ…, ಸುವರ್ಣ ಗ್ರಾಮದಲ್ಲಿ ಮೂಲಭೂತ ಸೌಕರ್ಯದ ಕೊರತೆ…!?” ಅಯ್ಯೋ ಪ್ರಾಬ್ಲಂ ಕಣ್ರೀ…?
ಸುದ್ದಿ @ ಮೊಳಹಳ್ಳಿ:-” ಅದೊಂದು ಕುಗ್ರಾಮ, ಹರುಕು ಮುರುಕು ರಸ್ತೆಯ ಪಯಣ, ಕತ್ತಲೆ ಕವಿದ ರಸ್ತೆಗೆ ಚಂದ್ರನೇ ಬೀದಿ ದೀಪ, ಆಸ್ಪತ್ರೆಗಳಿಗೂ ಅದೇ ರಸ್ತೆಯಲ್ಲಿ ಸಾಗಬೇಕು, ಮದುವೆ ಸಮಾರಂಭಕ್ಕೂ ಅದೇ ರಸ್ತೆಯಲ್ಲಿ ಹೋಗಬೇಕು, ದಿನನಿತ್ಯ ಪ್ರಯಣಿಸುವಂತಹ ಶಾಲಾ ವಾಹನ ,ಆಟೋರಿಕ್ಷಾ ಹಾಗೂ ಇನ್ನಿತರ ಸರಕು ಸಾಗಾಣಿಕೆ ವಾಹನಗಳು ಡ್ಯಾನ್ಸ್ ಮಾಡಿಕೊಂಡೆ ಚಲಿಸಬೇಕಾಗುತ್ತದೆ. ಮಳೆಗಾಲದಲ್ಲಿ ಈಜೀ ದಡ ಸೇರಬೇಕು ,ಬೇಸಿಗೆಯಲ್ಲಿ ಧೂಳಿಗೆ ಕವಚವನ್ನ ಉಪಯೋಗಿಸಿ ಸಾಗಬೇಕು ಇದು ಗ್ರಾಮೀಣ ಭಾಗದ ರಸ್ತೆಯ ಒಂದರ ದುಸ್ಥಿತಿ…!” ಇದು ಯಾವ ರಸ್ತೆಯ ಕಥೆಯನ್ನ ಹೇಳುತ್ತಿದ್ದೀರಾ ಅಂತ ಅಂದುಕೊಂಡಿರಬಹುದು, ಹೌದು ಓದುಗರೇ, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಹುದೊಡ್ಡ ಗ್ರಾಮ ಎನಿಸಿಕೊಂಡಿರುವ ಮೊಳಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಲ್ಕನೇ ವಾರ್ಡ್ ಗೆ ಸಂಬಂಧಪಟ್ಟ ವಿಚಾರ…!”
ಮಳೆಗಾಲದಲ್ಲಿ ನೀರು ತುಂಬಿಕೊಳ್ಳುವ ಪಯಣ:
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ಕನೇ ವಾರ್ಡ್ ಕಾಜಾಡಿ ಮನೆ ಉಪ ಗ್ರಾಮವನ್ನು ಸಂಪರ್ಕ ಕಲ್ಪಿಸುವ ರಸ್ತೆಯದು, ನಂದಿಕೇಶ್ವರ ದೇವಸ್ಥಾನದಿಂದ ಸರಿಸುಮಾರು ಮಹಾಲಿಂಗೇಶ್ವರ ದೇವಸ್ಥಾನದವರೆಗೂ ಕಾಂಕ್ರೀಟೀಕರಣ ರಸ್ತೆ ನಿರ್ಮಿಸಲಾಗಿತ್ತು. ಹುಣಸೆ ಮಕ್ಕಿ ಮುಖ್ಯ ರಸ್ತೆಯಿಂದ ಮಾಸ್ತಿಕಟ್ಟೆ ಮಾರ್ಗವಾಗಿ, ಮಾವಿನಕಟ್ಟೆ ಸಂಧಿಸಿ ಮರತೂರು ಸಾಗುವ ರಸ್ತೆಯ ಎಡ ಭಾಗ ಪ್ರಯಾಣ ಬೆಳೆಸಿದರೆ ಕಾಜಾಡಿ ಮನೆ ರಸ್ತೆಯ ದುಸ್ಥಿತಿ ಎದುರಾಗುತ್ತದೆ.
ಮಳೆಗಾಲದ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ, ಹಾಲು ಉತ್ಪಾದಕರ ಕೇಂದ್ರಕ್ಕೆ ಸಾಗಲು, ಪೇಟೆ ಪಟ್ಟಣ ಗಳಿಗೆ, ದಿನ ನೌಕರಿಗೆ ಹಾಗೂ ಇನ್ನಿತರ ಕೆಲಸಗಳಿಗೆ ತೆರಳುವ ನಾಗರಿಕರು ಇದೇ ರಸ್ತೆಯನ್ನು ಅವಲಂಬಿಸಬೇಕಾಗುತ್ತದೆ. ಮಳೆಗಾಲದ ಸಂದರ್ಭದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್, ಬಿದ್ಕಲ್ ಕಟ್ಟೆ ಶಾಲಾ ವಾಹನ ಮನೆಯ ಸಮೀಪ ಬಾರದೆ, ಕಾಂಕ್ರೀಟೀಕರಣ ರಸ್ತೆಯಲ್ಲಿ ಪುಟ್ಟ ಪುಟ್ಟ ಮಕ್ಕಳನ್ನು ಬಿಟ್ಟು ಹೋಗುತ್ತಿದ್ದಾರೆ. ಚಾಲಕನ ಬಳಿ ಮಕ್ಕಳ ಪೋಷಕರು ಪದೇ ಪದೇ ಗೋಗಿರೆದರೂ ತನ್ನ ವಾಹನ ಎಲ್ಲಿ ರಿಪೇರಿ ಬಂದಿತು ಎಂಬ ಕಾಳಜಿಗೆ ಮಳೆಗಾಲದ ಸಂದರ್ಭದಲ್ಲಿ ಮನೆಯ ಹತ್ತಿರ ವಾಹನವನ್ನು ತರದೆ 2 km ದೂರದಲ್ಲಿ ವಾಹನವನ್ನು ನಿಲ್ಲಿಸಿ ಮಕ್ಕಳನ್ನು ಕರೆದುಕೊಂಡು ಹೋಗುವ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಕಾಡುದಾರಿಯಾದರಿಂದ ಸಂಜೆಯ ಸಮಯದಲ್ಲಿ ಜಿಂಕೆ, ಕಾಡು ಹಂದಿ,ಹಾವು, ಇನ್ನಿತರ ಕಾಡುಪ್ರಾಣಿಗಳು ಸಂಚರಿಸುವ ಜಾಗದಲ್ಲಿ ಎಳೆ ಮಕ್ಕಳ ಜೀವಗಳಿಗೆ ಬೆಲೆ ಇಲ್ಲದ ರೀತಿಯಲ್ಲಿ ವರ್ತಿಸುವ ವಾಹನ ಚಾಲಕರು ಒಂದೆಡೆಯಾದರೆ, ಇನ್ನೊಂದೆಡೆ ರಸ್ತೆ ಸರಿ ಇಲ್ಲ ಎಂಬ ನೆಪ ಹೇಳಿ ವಾಹನ ಚಾಲಕರು ಈ ರಸ್ತೆಗೆ ಬರಲು ಇರಸು ಮುರುಸು ಮಾಡುತ್ತಿದ್ದಾರೆ. ಮೊಳಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಜಾಡಿ ಮನೆ ಉಪ ಗ್ರಾಮ ಸುಮಾರು 10 ಮನೆಯ ಕುಟುಂಬಸ್ಥರು ವಾಸವಾಗಿರುವ ಪ್ರದೇಶ., ಮೊಲಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರಿರುವ ಈ ರಸ್ತೆ ಕಾಮಗಾರಿ ಕಾಣದೆ ಹಲವು ವರ್ಷಗಳು ಕಂಡಿದೆ.
ಅಂಗೈಯಗಲ ಕಾಂಕ್ರಿಟೀಕರಣ:-
ಕಾಜಾಡಿ ಮನೆ ರಸ್ತೆಗೆ ಒಳ ಪ್ರವೇಶಿಸಿದರೆ ಅಂಗೈಯಗಲ ಕಾಂಕ್ರಿಟೀಕರಣ ಮಾಡಿ ಕೈ ಚೆಲ್ಲಿ ಕುಳಿತಿದೆ, ಎರಡು ಮೀಟರ್ ಗಳಷ್ಟು ರಸ್ತೆಯನ್ನ ನಿರ್ಮಾಣ ಮಾಡಿ ಮುಗಿಸಿದ್ದು ಸಾರ್ವಜನಿಕರ ಆಕ್ರೋಶಗೆ ಕಾರಣವಾಗಿತ್ತು. ನೀರಿನ ಸಂಪರ್ಕವನ್ನ ಮಾಡಿ ನಿಲ್ಲಿಸಲಾಗಿದೆ, ಕಾಂಕ್ರಿಟೀಕರಣ ರಸ್ತೆಯು ಸ್ವಲ್ಪ ಭಾಗದಲ್ಲಿ ಮಾಡಿ ಮತ್ತೆ ಮಣ್ಣು ರೋಡಿನ ದುರ್ಗತಿ ನಿರ್ಮಾಣವಾಗಿದೆ. ಮಳೆಗಾಲದ ಸಂದರ್ಭದಲ್ಲಿ ಈ ರಸ್ತೆಯಲ್ಲಿ ಸಾಗಬೇಕೆಂದರೆ ಜೀವವನ್ನು ಕೈಯಲ್ಲಿ ಹಿಡಿದು ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಮರ್ಪಕವಾದ ವಿದ್ಯುತ್ ಸೌಕರ್ಯಗಳಿಲ್ಲದೆ ಈ ರಸ್ತೆ ಕಮರಿ ಹೋಗುತ್ತಿದೆ. ಇನ್ನೊಂದೆಡೆ ಮಳೆಗಾಲದಲ್ಲಿ ಗುಂಡಿಗಳಿಂದ ಕೂಡಿದ ರಸ್ತೆ ರಸ್ತೆಯ ಮಧ್ಯ ಭಾಗದಲ್ಲೇ ಮಳೆ ನೀರು ಬಂದು ಶೇಖರಣೆಯಾಗುತ್ತಿದೆ. ವಾಹನವನ್ನು ಬಿಟ್ಟು ನಡೆದು ಸಂಚಾರ ಮಾಡುವ ಎಂದರೆ ರಸ್ತೆಯಲ್ಲಿ ನೀರು ತುಂಬಿಕೊಂಡು ರಸ್ತೆ ಕಾಣದಂತಹ ಪರಿಸ್ಥಿತಿಯಲ್ಲಿ ನಿರ್ಮಾಣವಾಗುತ್ತದೆ. ಜಾನುವಾರುಗಳನ್ನು ಮೇಯಿಸಲು ಇದೇ ರಸ್ತೆ ಮಾರ್ಗದ ಮೂಲಕ ಸಂಚರಿಸುವುದರಿಂದ ಈ ರಸ್ತೆಯ ಭಾಗಗಳು ಸಂಪೂರ್ಣವಾಗಿ ಇಕ್ಕಲಗಳು ಕುಸಿದು ಚರಂಡಿ ಪಾಲಾಗಿದೆ. ಮುಂದಿನ ಜೂನ್ ಸಂದರ್ಭದಲ್ಲಿ ಮಳೆ ಪ್ರಾರಂಭವಾಗುವ ಮುಂಚೆಯೇ ಈ ರಸ್ತೆಯನ್ನು ನಿರ್ಮಾಣ ಮಾಡಿದರೆ ನಿಜವಾಗಲೂ ಇಲ್ಲಿನ ಸಾರ್ವಜನಿಕರು ನೆಮ್ಮದಿಯಿಂದ ಬದುಕಬಹುದಾಗಿದೆ. ಇಲ್ಲಂದರೆ ಕಳೆದ ವರ್ಷದ ನರಕ ಸದೃಶ ಈ ಬಾರಿಯೂ ಪುನರಾವರ್ತನೆ ಆಗುವಲ್ಲಿ ಎರಡು ಮಾತಿಲ್ಲ.
ಮೊಳಹಳ್ಳಿ ಸುವರ್ಣ ಗ್ರಾಮ:
ಡಾ. ವಿ .ಎಸ್. ಆಚಾರ್ಯ ಅವರಿಂದ ಉದ್ಘಾಟನೆಗೊಂಡ ಮೊಳಹಳ್ಳಿ ಸುವರ್ಣ ಗ್ರಾಮ 10 ಹಲವು ಯೋಜನೆಗಳನ್ನ ಕಾರ್ಯರೂಪಕ್ಕೆ ತಂದಿತ್ತು. ಉಪ ಗ್ರಾಮಗಳಲ್ಲಿ ಬೇಕಾ ಬೇಕಾದಂತಹ ಸೌಲಭ್ಯಗಳನ್ನ ನೀಡಿತ್ತು. ಸಮರ್ಪಕ ರಸ್ತೆ ನಿರ್ವಹಣೆ, ಬೀದಿ ದೀಪ ಅಳವಡಿಕೆ, ಬಸ್ ನಿಲ್ದಾಣ ಹಾಗೂ ಇನ್ನಿತರ ಸೌಕರ್ಯಗಳು ಮಾಡುತ್ತಾ ಬಂದಿದೆ. ಅದೇ ರೀತಿ ಮೊಳಹಳ್ಳಿ ಗ್ರಾಮ ದಲ್ಲಿ ಇನ್ನೂ ಬಹುತೇಕ ಸಮಸ್ಯೆಗಳು ಎದ್ದು ಕಾಣುತ್ತಿದ್ದು ,ಮರತೂರು ಸಮೀಪದಲ್ಲಿ ನೀರಿನ ಸಮಸ್ಯೆ, ಕಲ್ಯಾಣ ಬಿಟ್ಟು ಪರಿಸರದಲ್ಲಿ ನೀರಿನ ಸಮಸ್ಯೆ, ಮಾವಿನ ಕಟ್ಟೆ ಭಾಗದಲ್ಲಿ ನೀರಿನ ಕೊರತೆ, ಅದಲ್ಲದೆ ಗ್ರಾಮದ ಸುತ್ತಮುತ್ತಲ್ಲ ಬೀದಿ ದೀಪದ ಕೊರತೆ ಎದ್ದು ಕಾಣುತ್ತಿದ್ದು ಕತ್ತಲೆಯ ದಿನಕಥೆ ಹೇಳುತ್ತಿರುವ ಮೊಳಹಳ್ಳಿಯ ಕೆಲವು ಭಾಗಗಳು ಇನ್ನು ಮರಿಚಿಕೆಯಾಗಿ ಉಳಿದಿದೆ. ಕಾಡು ಪ್ರಾಣಿಗಳ ಹಾವಳಿ ವಿಪರೀತ ಇರುವುದರಿಂದ ಈ ಭಾಗದ ರಸ್ತೆಗಳಲ್ಲಿ ಸಂಜೆ ಏಳರ ನಂತರ ಪಯಣ ದುಸ್ಥಿತಿಯಾಗಿದೆ. ಸೆಲ್ಕೋ ಸೋಲಾರ್ ಸಿಸ್ಟಮ್ ಅವರು ಅಳವಡಿಸಿರುವ ಸೋಲಾರ್ ದೀಪ ಹಾಗೂ ಬ್ಯಾಟರಿಗಳನ್ನ ಕಿಡಿಗೇಡಿಗಳು ಕಳ್ಳತನ ಮಾಡಿ ಇನ್ನಷ್ಟು ತಲೆನೋವು ಕೊಟ್ಟಿದೆ.
ಸೌಲಭ್ಯಗಳು ಮರೀಚಿಕೆ:-
1.ಮೊಳಹಳ್ಳಿ ಗ್ರಾಮದ ಬಹುತೇಕ ಭಾಗಗಳಲ್ಲಿ ನೀರಿನ ಸಮಸ್ಯೆಗಳು ಎದ್ದು ಕಾಣುತ್ತಿದೆ,
2.ಪರ್ಯಾಯವಾಗಿ ಬೀದಿ ದೀಪಗಳ ಅಳವಡಿಕೆಯನ್ನ ಮಾಡಬೇಕಿದೆ .
3.ಹದಗೆಟ್ಟಿರುವ ರಸ್ತೆಗಳನ್ನ ರಿಪೇರಿ ಮಾಡಬೇಕಿದೆ. 4.ಡಾಂಬರೀಕರಣದ ಕಾಣದ ಕಾಜಾಡಿ ಮನೆಂತಹ ಕೆಲವು ಗ್ರಾಮಗಳಲ್ಲಿ ಡಾಂಬರೀಕರಣವೇ ನೋಡಿಲ್ಲ.
5. ಬಸ್ ನಿಲ್ದಾಣಗಳಲ್ಲಿ ಸುಚಿತ್ವಗಳು ಮರೆಯಾಗಿದೆ.
6. ಕಾಡು ಪ್ರದೇಶಗಳಲ್ಲಿ ರಾತ್ರಿ ಸಮಯದಲ್ಲಿ ನಿರಂತರ ಸೌರ ವಿದ್ಯುತ್ ಅಗತ್ಯತೆ ಇದೆ.
7. ಕೆಲವು ದಿನಸಿ ಅಂಗಡಿಗಳಲ್ಲಿ ಅಕ್ರಮ ಸರಾಯಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಗ್ರಾಮ ಪಂಚಾಯತ್ ಗಮನಹರಿಸಬೇಕು.
8. ಅಬಕಾರಿ ಅಧಿಕಾರಿಗಳು ಇಂತಹ ದಿನಸಿ ಅಂಗಡಿಗಳ ಅಕ್ರಮ ಶರಾಬು ಮಾರಾಟ ಜಾಲ ಪತ್ತೆ ಹಚ್ಚಬೇಕು.
9. ಶರಬು ಮಾರಾಟ ಮಾಡುವುದರಿಂದ ಮಹಿಳೆಯರು ಕುಡುಕರಾಗುತ್ತಿರುವುದು ಪ್ರಸ್ತುತ ದಿನ ಮಾನಸಗಳಲ್ಲಿ ಎದ್ದು ಕಾಣುತ್ತಿದೆ.
10. ಮತದಾನ ಸಂದರ್ಭದಲ್ಲಿ ಬಂದು ಸಮಸ್ಯೆ ಕೇಳುವುದಕ್ಕಿಂತ ಉಳಿದ ದಿನಗಳಲ್ಲಿ ಜನರ ಸಮಸ್ಯೆಗೆ ಧ್ವನಿ ಆಗಬೇಕು.
ಹೀಗೆ ಹತ್ತು ಹಲವು ಸಮಸ್ಯೆಗಳನ್ನ ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ರೋಡನೆ ಉತ್ತಮ ಒಡಂಬಡಿಕೆ ಮಾಡಿಕೊಂಡು ,ಸಮಸ್ಯೆಗಳನ್ನ ಬಗೆಹರಿಸುವಲ್ಲಿ ಸಂಬಂಧಪಟ್ಟವರು ಗಮನ ಹರಿಸಬೇಕಿದೆ. ಹೀಗೆ ಮೊಳಹಳ್ಳಿ ಎಂಬ ಬಹುದೊಡ್ಡ ಗ್ರಾಮದಲ್ಲಿ ಇಷ್ಟು ಸಮಸ್ಯೆಗಳು ಹಾಗೂ ಇದಕ್ಕಿಂತಲೂ ಹೆಚ್ಚು ಸಮಸ್ಯೆಗಳು ತಾಂಡವಾಡುತ್ತಿದೆ. ಅಧಿಕಾರದಲ್ಲಿರುವಂತಹ, ಸಂಬಂಧ ಪಟ್ಟಂತಹ ಸಿಬ್ಬಂದಿಗಳು ಇತ್ತ ಗಮನ ಹರಿಸಿ ಸಾರ್ವಜನಿಕರ ಸಮಸ್ಯೆಯನ್ನ ಬಗೆಹರಿಸುವಲ್ಲಿ ಪ್ರಯತ್ನ ಪಡಬೇಕಿದೆ.
ಈ ಲೇಖನದಲ್ಲಿ ನಾವು ಯಾರ ಬಗ್ಗೆನೂ ದೂಷಿಸುತ್ತಿಲ್ಲ ಮತ್ತು ದೂರು ಮಾಡುತ್ತಿಲ್ಲ ಸಾರ್ವಜನಿಕರ ಸಮಸ್ಯೆಗಳನ್ನ ಗಮನಕ್ಕೆ ತರುತ್ತಿದ್ದೇವೆ ಅಷ್ಟೇ.., ಎನ್ನುವುದೇ ಈ ವರದಿಯ ಉದ್ದೇಶ. ಗ್ರಾಮ ಉದ್ಧಾರವಾದರೆ ಪಟ್ಟಣ ಉದ್ಧಾರವಾದಂತೆ.., ಎನ್ನುವ ಮಾತು ನಮ್ಮಿಂದಲೇ ಪ್ರಾರಂಭವಾಗಲಿ ಎನ್ನುವ ಉದ್ದೇಶ ನಮ್ಮದು.