


ಡೈಲಿ ವಾರ್ತೆ: 28//ಆಗಸ್ಟ್/ 2025


ಸೌಜನ್ಯ ಪ್ರಕರಣದ ಹೋರಾಟ ಬಿಜೆಪಿ ರಾಜಕೀಯ ಗಿಮಿಕ್: ಆರ್.ಎಸ್.ಎಸ್ ನಾಯಕರ ತನಿಖೆಗೆ ಇಂಟೆಕ್ ಆಗ್ರಹ – ಕಿರಣ್ ಹೆಗ್ಡೆ

ಉಡುಪಿ: ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟದ ಕುರಿತು ರಾಜಕೀಯ ವಲಯದಲ್ಲಿ ಪರಸ್ಪರ ವಾಗ್ದಾಳಿಗಳು ಮುಂದುವರಿದಿವೆ. ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಇಂಟೆಕ್‌ನ ಉಡುಪಿ ಜಿಲ್ಲಾಧ್ಯಕ್ಷ ಕಿರಣ್ ಹೆಗ್ಡೆ ಅವರು, ಬಿಜೆಪಿಯವರ ಹೋರಾಟ ರಾಜಕೀಯ ಪ್ರೇರಿತವಾಗಿದೆ ಎಂದು ಗಂಭೀರ ಆರೋಪ ಮಾಡುವುದರ ಜೊತೆಗೆ, ಹೋರಾಟದಲ್ಲಿರುವ ಆರ್.ಎಸ್.ಎಸ್ ನಾಯಕರ ತನಿಖೆಗೂ ಆಗ್ರಹಿಸಿದ್ದಾರೆ.
ಈ ಪ್ರಕರಣದ ಬಗ್ಗೆ ಮಾತನಾಡಿದ ಅವರು, “ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿತ್ತು. ನಂತರದ ದಿನಗಳಲ್ಲಿ ವೀರೇಂದ್ರ ಹೆಗಡೆಯವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ದು ಕೂಡ ಬಿಜೆಪಿಯೇ. ಹಾಗಾಗಿ, ಈಗ ಯಾರಾದರೂ ನ್ಯಾಯಕ್ಕಾಗಿ ಹೋರಾಟ ಮಾಡುವುದಿದ್ದರೆ, ಅದು ಬಿಜೆಪಿ ಮತ್ತು ಆರ್.ಎಸ್.ಎಸ್ ವಿರುದ್ಧವೇ ಆಗಿರಬೇಕು. ಆದರೆ, ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ವಿರೋಧ ಹೇಳಿಕೆಗಳನ್ನು ನೀಡುತ್ತಿರುವುದು ಏಕೆ?” ಎಂದು ಅವರು ಪ್ರಶ್ನಿಸಿದರು. “ಹೋರಾಟ ಮಾಡಿದ ಆರ್.ಎಸ್.ಎಸ್ ನಾಯಕರನ್ನು ಕೂಡಲೇ ತನಿಖೆ ಮಾಡಬೇಕು” ಎಂದು ಅವರು ಒತ್ತಾಯಿಸಿದರು.
ಇದೇ ವೇಳೆ ಬಿಜೆಪಿ ಶಾಸಕರಾದ ಸುನೀಲ್ ಕುಮಾರ್ ಮತ್ತು ವಿಶ್ವನಾಥ್ ಅವರಿಗೆ ನೇರ ಸವಾಲೆಸೆದ ಕಿರಣ್ ಹೆಗ್ಡೆ, “ಸೌಜನ್ಯ ಪ್ರಕರಣದ ಕುರಿತು ಜನರಿಗೆ ಸ್ಪಷ್ಟ ಉತ್ತರ ನೀಡಬೇಕು. ಕೇವಲ ಹೋರಾಟದ ನಾಟಕದ ಮೂಲಕ ಜನರನ್ನು ಮೂರ್ಖರನ್ನಾಗಿಸುವುದು ನಿಲ್ಲಿಸಬೇಕು” ಎಂದು ಆಗ್ರಹಿಸಿದರು.
ಅವರ ಹೋರಾಟವನ್ನು ಗಮನಿಸಿದರೆ, ಇದು ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಒಂದು ಪೂರ್ವಸಿದ್ಧತೆಯಾಗಿ ಕಾಣಿಸುತ್ತಿದೆ. ಅವರಿಗೆ ಸೌಜನ್ಯ ಮೇಲೆ ಯಾವುದೇ ಮಮಕಾರವಾಗಲಿ ಅಥವಾ ಆಕೆಗೆ ಆದ ಅನ್ಯಾಯದ ಬಗ್ಗೆ ಪಶ್ಚಾತ್ತಾಪವಾಗಲಿ ಇರುವುದಿಲ್ಲ ಎಂದರು.
ಕೊನೆಯದಾಗಿ, ಆರ್.ಎಸ್.ಎಸ್ ಮತ್ತು ಬಿಜೆಪಿಯವರ ಉದ್ದೇಶ ದೇವರ ಹೆಸರಿನಲ್ಲಿ ಹಣ ಮಾಡುವುದು. ಈ ನೆಲದ ಧಾರ್ಮಿಕತೆಯ ಬಗ್ಗೆ ಅವರಿಗೆ ಯಾವುದೇ ನಂಬಿಕೆ ಇಲ್ಲ. ಈ ನಾಡಿನ ಶೈವರನ್ನು ತುಳಿಯುವುದೇ ಇವರ ಉದ್ದೇಶ ಎಂದು ಕಿರಣ್ ಹೆಗ್ಡೆ ಗಂಭೀರ ಆರೋಪ ಮಾಡಿದರು.