ಡೈಲಿ ವಾರ್ತೆ:15 ಮಾರ್ಚ್ 2023
ಬೇನಾಮಿ ಆಸ್ತಿ ಆರೋಪ ಕಾರ್ಕಳ ಶಾಸಕರ ವಿರುದ್ದ ಮತ್ತೊಂದು ದಾಖಲೆ ಬಿಡುಗಡೆ ಮಾಡಿದ ಮುತಾಲಿಕ್
ಕಾರ್ಕಳ: ಕಾರ್ಕಳ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಘೋಷಣೆ ಮಾಡಿದ ಬಳಿಕ ಕ್ಷೇತ್ರದ ಶಾಸಕರ ವಿರುದ್ಧ ಬೇನಾಮಿ ಆಸ್ತಿ ಆರೋಪ ಮಾಡಿರುವ ಶ್ರೀ ರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಇದೀಗ ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಸುಮಾರು 5 ಕೋಟಿ ಮೌಲ್ಯದ 4.71 ಎಕರೆ ಜಾಗವನ್ನು ಅಕ್ರಮವಾಗಿ ಮಂಜೂರು ಮಾಡಿದ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ಹೆಬ್ರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕಾರ್ಕಳದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಹಾಗೂ ಹಿಂದುತ್ವಕ್ಕೆ ದಕ್ಕೆಯಾಗಿದೆ ಎಂದು ಮೂಲ ಬಿಜೆಪಿ ಕಾರ್ಯಕರ್ತರ ಅಪೇಕ್ಷೆಯ ಮೇರೆಗೆ ಕಾರ್ಕಳ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಕುರಿತು ಘೋಷಣೆ ಮಾಡಿದ್ದೇನೆ. ಅಕ್ರಮ ಸಕ್ರಮ ಕಾನೂನಿನ ನಿಯಮವನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜಾಗ ಮಂಜೂರು ಮಾಡಲಾಗಿದೆ. ಕಾರ್ಕಳದ ಶಾಸಕ ಸುನಿಲ್ ಕುಮಾರ ಅಧ್ಯಕ್ಷತೆಯ ಸಮಿತಿಯಲ್ಲಿ ಸುಮಾರು 2000 ಅರ್ಜಿಗಳು ಬಂದಿದ್ದರೂ ಸಹಾ ಅವುಗಳನ್ನು ತಿರಸ್ಕರಿಸಿ ಪ್ರಥಮ ದರ್ಜೆ ಗುತ್ತಿಗೆದಾರನಾದ ಅನಂತಕೃಷ್ಣ ಶೆಟ್ಟಿ, ಅವರಿಗೆ ಅಕ್ರಮವಾಗಿ ಸರ್ವೆ ನಂ 341-1 ರಲ್ಲಿ 4.71 ಎಕ್ರೆ ಜಾಗವನ್ನು ಮಂಜೂರು ಮಾಡಲಾಗಿದೆ. ಇದನ್ನು ಎಷ್ಟು ಕಮೀಷನ್ ಪಡೆದು ಮಂಜೂರು ಮಾಡಿದ್ದಾರೆ ಎಂದು ಸುನಿಲ್ ಕುಮಾರ್ ಉತ್ತರಿಸಲಿ. ಇದು ಜನಸಾಮಾನ್ಯರಿಗೆ ಮಾಡಿದ ದ್ರೋಹ ಇದನ್ನು ನಾನು ಖಂಡಿಸುತ್ತೇನೆ ಎಂದರು.
ಅಕ್ರಮ ಸಕ್ರಮ ಅರ್ಜಿ ಸಲ್ಲಿಸುವಾಗ ತಾನು ಪ್ರಥಮ ದರ್ಜೆ ಗುತ್ತಿಗೆದಾರನಾದರೂ ಕೂಡ ಈ ಅನಂತಕೃಷ್ಣ ಶೆಟ್ಟಿ ನಾನೊಬ್ಬ ಕೃಷಿಕ ಎಂದು ಸುಳ್ಳು ಹೇಳಿ ಒಬ್ಬ ಕೋಟ್ಯಾಧಿಪತಿ ಬಡವರ ಪಾಲಗಬೇಕಿದ್ದ ಭೂಮಿಯನ್ನು ಅಕ್ರಮವಾಗಿ ಪಡೆದಿದ್ದಾರೆ. ಇವರ ವಿರುದ್ಧ ಕ್ರಿಮಿನಲ್ ಮೊಕ್ಕದಮೆ ಹೂಡಿ ಈ ಭೂಮಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಹಾಗೂ ಈಗಾಗಲೇ ಒಂದು ಭೂ ಹಗರದ ದಾಖಲೆಯನ್ನು ಲೋಕಯುಕ್ತಕ್ಕೆ ಸಲ್ಲಿಸಿದ್ದು ಈ ಪ್ರಕಟವನ್ನೂ ಸಹಾ ಲೋಕಯುಕ್ತಕ್ಕೆ ದೂರು ನೀಡಲಾಗುತ್ತದೆ. ಕ್ರಮ ಕೈಗೊಳ್ಳಲು ಮೀನಮೇಷ ಎಣಿಸಿದರೆ ಲೋಕಯುಕ್ತ ಕಚೇರಿ ಮುಂದೆ ಧರಣಿ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶ್ರೀ ರಾಮಸೇನಾ ರಾಜ್ಯ ಕಾರ್ಯಧ್ಯಕ್ಷ ಗಂಗಾಧರ್ ಕುಲಕರ್ಣಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್, ನಾಯಕರಾದ ಹರೀಶ್ ಅಧಿಕಾರಿ, ಸುಧೀರ್ ಹೆಬ್ರಿ, ರಾಘವ್ ನಾಯಕ್ ಮುದ್ರಾಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.