ಡೈಲಿ ವಾರ್ತೆ:15 ಮಾರ್ಚ್ 2023

ಕಾಣೆಯಾದ ವ್ಯಕ್ತಿ ಕಟಪಾಡಿ ರಾ.ಹೆ. 66ರ ರಸ್ತೆಪೊದೆಯ ಗಿಡಗಂಟಿಗಳ ನಡುವೆ ತೀವ್ರ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಪತ್ತೆ

ಉಡುಪಿ : ಹುಬ್ಬಳ್ಳಿ ಮೂಲದ ರವಿ ಎಂಬವರು ಕಾಣೆಯಾಗಿದ್ದಾರೆ ಎಂದು ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಂಗಳವಾರ ಕಟಪಾಡಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಗಿಡಗಂಟಿಗಳ ನಡುವೆ ತೀವ್ರ ಅಸ್ವಸ್ಥಗೊಂಡ ಪರಿಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮಾಹಿತಿ ಪಡೆದ ಸಮಾಜ ಸೇವಕ ವಿಶು ಶೆಟ್ಟಿ ಅವರು ತಕ್ಷಣ ಸ್ಥಳಕ್ಕೆ ಧಾವಿಸಿ ಸಾಮಾಜಿಕ ಕಾರ್ಯಕರ್ತರ ನೆರವಿನಿಂದ ವ್ಯಕ್ತಿಯನ್ನು ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ರವಿ ಮೂಲತ: ಹುಬ್ಬಳ್ಳಿಯವರಾಗಿದ್ದು, ಉಡುಪಿಗೆ ಬಂದು ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಅವರು ದಿಡೀರ್ ನಾಪತ್ತೆಯಾದ ಹಿನ್ನಲೆಯಲ್ಲಿ ಸಂಬಂಧಿಕರು ಉಡುಪಿಗೆ ಬಂದು ವಿವಿಧ ಕಡೆಗಳಲ್ಲಿ ಹುಡುಕಾಟ ನಡೆಸಿದ್ದರು, ಆದರೆ ಯಾವುದೇ ಫಲಶ್ರುತಿ ಕಾಣದ ಹಿನ್ನಲೆಯಲ್ಲಿ ಕೊನೆಗೆ ಉಡುಪಿ ನಗರಠಾಣೆಯಲ್ಲಿ ಕಾಣೆಯಾದ ಬಗ್ಗೆ ಎಫ್‌ಐಆರ್ ದಾಖಲಿಸಿ ಊರಿಗೆ ತೆರಳಿದ್ದರು. ಇದೀಗ ವ್ಯಕ್ತಿ ಪತ್ತೆಯಾದ ಹಿನ್ನಲೆಯಲ್ಲಿ ಸಂಬಂಧಿಕರರಿಗೆ ಮಾಹಿತಿ ನೀಡಲಾಗಿದ್ದು ಅವರು ಉಡುಪಿಗೆ ಹೊರಟಿರುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಸಾಮಾಜಿಕ ಕಾರ್ಯಕರ್ತ ರಾಮದಾಸ್ ಪಾಲನ್ ಉದ್ಯಾವರ ಸಹಕರಿಸಿದ್ದರು. ಅಸ್ವಸ್ಥ ವ್ಯಕ್ತಿಗೆ ಆಹಾರ ನೀಡಿ ತುರ್ತು ರಕ್ಷಣಾ ಕಾರ್ಯಕ್ಕೆ ಮಾಹಿತಿ ನೀಡಿ ನೆರವಾದ ಕಟಪಾಡಿಯ ಸಾಧನಾ ಪೈ ಹಾಗೂ ಸಮಾಜ ಸೇವಕ ವಿಶು ಶೆಟ್ಟಿ ಅವರ ಸಾಮಾಜಿಕ ಕಳಕಳಿ ಪ್ರಶಂಸೆಗೆ ಪಾತ್ರವಾಗಿದೆ.