ಡೈಲಿ ವಾರ್ತೆ:15 ಮಾರ್ಚ್ 2023

ಕಾಂಗ್ರೆಸ್ “ಬಂಟ್ವಾಳ ಪ್ರಜಾಧ್ವನಿ” ಕಾರ್ಯಕ್ರಮ: ದೇಶದ ಅಭಿವೃದ್ಧಿ ಹಾಗೂ ಸಾಮರಸ್ಯದ ಬದುಕಿಗಾಗಿ ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸಮಾಡಿ-ಕೆ.ಅಬ್ದುಲ್ ಜಬ್ಬಾರ್

ಬಂಟ್ವಾಳ : ದೇಶದ ಸರ್ವತೋಮುಖ ಅಭಿವೃದ್ಧಿ ಹಾಗೂ ಸಾಮರಸ್ಯದ ಬದುಕಿಗಾಗಿ ದರಿದ್ರ ಬಿಜೆಪಿಯನ್ನು ತೊಲಗಿಸಲು ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು
ಎಂದು ವಿಧಾನ ಸಭಾ ಸದಸ್ಯ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕಾದ್ಯಕ್ಷ ಕೆ.ಅಬ್ದುಲ್ ಜಬ್ಬಾರ್ ಅವರು ಹೇಳಿದರು.



ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ನಡೆಯುತ್ತಿರುವ “ಬಂಟ್ವಾಳ ಪ್ರಜಾಧ್ವನಿ” ಯಾತ್ರೆಯ 4ನೇ ದಿನ ಮಾವಿನಕಟ್ಟೆ ಜಂಕ್ಷನ್ನಿನಲ್ಲಿ ನಡೆದ ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಳೆದ 70 ವರ್ಷಗಳಲ್ಲಿ ದೇಶದ ಅಭಿವೃದ್ಧಿಯಲ್ಲಿ ಮಹತ್ತರವಾದ ಕೊಡುಗೆಯನ್ನು ನೀಡಿದ ಕಾಂಗ್ರೆಸನ್ನು ಪ್ರಶ್ನಿಸುವ ಬಿಜೆಪಿಯವರು ಕಳೆದ ಎರಡು ಅವಧಿಯಲ್ಲಿ ಎಲ್ಲವನ್ನೂ ಮಾರಿ ಇದೀಗ ಎಲ್ಲೈಸಿಯನ್ನು ಖಾಸಗೀಕರಣಗೊಳಿಸಲು ಮುಂದಾಗಿರುವುದು ಬಿಜೆಪಿಯ ಸಾಧನೆಯೇ ಎಂದು ಪ್ರಶ್ನಿಸಿದರು.



15 ಲಕ್ಷ ಖಾತೆಗೆ, ಕಪ್ಪು ಹಣ ವಾಪಸ್, ಯುವಕರಿಗೆ ಎರಡು ಕೋಟಿ ಉದ್ಯೋಗದಂತಹ ಪೊಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಇದುವರೆಗೂ ಅದನ್ನು ನಿಭಾಯಿಸಿಲ್ಲ. ಕಾಂಗ್ರೆಸ್ ಎಂದೂ ಪೊಳ್ಳು ಭರವಸೆ ನೀಡುವುದಿಲ್ಲ. ನುಡಿದಂತೆ ನಡೆಯಲು ಸಾಧ್ಯ ಇರುವ ಭರವಸೆಗಳನ್ನು ಮಾತ್ರ ನೀಡುತ್ತದೆ ಮತ್ತು ಅದನ್ನು ಕಾರ್ಯಗತ ಗೊಳಿಸುತ್ತದೆ ಎಂದರು.



ಮಾಜಿ ಸಚಿವ ಪ್ರಜಾಧ್ವನಿ ಯಾತ್ರೆಯ ಮುಂದಾಳು ಬಿ.ರಮಾನಾಥ ರೈ ಅವರು ಮಾತನಾಡಿ ಬಂಟ್ವಾಳ ಕ್ಷೇತ್ರದ ಜನ ಆರು ಬಾರಿ ನನ್ನನ್ನು ಗೆಲ್ಲಿಸಿದ್ದೀರಿ. ಮೂರು ಬಾರಿ ಮಂತ್ರಿಯಾಗಲು ಸಹಕಾರ ನೀಡಿದ್ದೀರಿ. ನಿಮ್ಮ ಋಣ ತೀರಿಸಲು ಸಾಧ್ಯ ಆಗದಿದ್ದರೂ ಕ್ಷೇತ್ರದ ಜನ ತಲೆ ತಗ್ಗಿಸುವ ಕೆಲಸವಂತೂ ನಾನು ಮಾಡಿಲ್ಲ ಎಂಬ ತೃಪ್ತಿ ಇದೆ. ಸಿದ್ದಾಂತದಲ್ಲಿ ರಾಜಿ ಮಾಡುವ ಕೀಳುಮಟ್ಟದ ರಾಜಕೀಯ ಯಾವತ್ತೂ ರಮಾನಾಥ ರೈ ಮಾಡಿಲ್ಲ. ಆಸೆ-ಆಕಾಂಕ್ಷೆ, ಆಮಿಷ, ಕಮಿಷನ್ ಇದ್ಯಾವುದಕ್ಕೂ ಬಗ್ಗದೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನನ್ನ ಅವಧಿಯಲ್ಲಿ ಮನಸ್ಸಿಗೆ ಸಮಾಧಾನ ತರುವ ಮಟ್ಟಿಗೆ ಅಭಿವೃದ್ದಿ ಮಾಡಿದ್ದೇನೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಮನೆ ಬಾಗಿಲಿಗೆ ಕುಡಿಯುವ ನೀರು ಒದಗಿಸಿದ ತೃಪ್ತಿ ಇದೆ ಎಂದ ರಮಾನಾಥ ರೈ ಎಂಎಲ್ಸಿ ಆಗುವ ಅವಕಾಶವನ್ನು ಪಕ್ಷದ ನಾಯಕರು ನೀಡಿದ್ದು, ಅವಕಾಶ ನನ್ನನ್ನು ಅರಸಿ ಬಂದಿದ್ದರೂ ಕ್ಷೇತ್ರದ ಜನರನ್ನು ನಂಬಿ ಅದನ್ನು ತಿರಸ್ಕರಿಸಿ ಜನರಿಂದ ನೇರವಾಗಿ ಆಯ್ಕೆಯಾಗುವ ಅವಕಾಶಕ್ಕಾಗಿ ಮತ್ತೆ ಚುನಾವಣಾ ಕಣಕ್ಕೆ ಬಂದಿದ್ದೇನೆ. ಜನ ಮತ್ತೆ ಕೈ ಹಿಡಿಯುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.



ನಾನು ಕೊನೆಯ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ, ನನ್ನ ಅವಧಿಯಲ್ಲಿ ಮಂಜೂರಾತಿ ಪಡೆದು ಬಾಕಿಯಾದ ಸೌಹಾರ್ದ ಸೇತುವೆ, ಬೆಂಜನಪದವು ಕ್ರೀಡಾಂಗಣ, ಪಂಜೆ ಮಂಗೇಶ್ವರಾಯರ ಸಮುದಾಯ ಭವನ, ಅಂಬೇಡ್ಕರ್ ಭವನ ಮೊದಲಾದ ಕಾಮಗಾರಿಗಳನ್ನು ಪೂರ್ಣಮಾಡಬೇಕು ಎಂಬ ಕನಸು ನನ್ನದು,ಅದಕ್ಕಾಗಿ ನಾನು ಮತ್ತೊಮ್ಮೆ ಶಾಸಕನಾಗಿ ಆಯ್ಕೆಯಾಗಲು ಅವಕಾಶ ನೀಡಿ ಎಂದು ಮನವಿ ಮಾಡಿದರು..

ಈ ಸಂದರ್ಭದಲ್ಲಿ ಪ್ರಜಾಧ್ವನಿ ಯಾತ್ರೆಯ ಪ್ರಮುಖ ಪಿಯೂಸ್ ಎಲ್ .ರೋಡ್ರಿಗಸ್, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಮುದಬ್ಬಿರ್ ಅಹಮದ್ ಖಾನ್, ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸುದೀಪ್ ಶೆಟ್ಟಿ, ಪ್ರಮುಖರಾದ ಸುದರ್ಶನ ಜೈನ್, ಅಬ್ಬಾಸ್ ಆಲಿ, ವಾಸುಪೂಜಾರಿ, ರಾಜೀವ ಶೆಟ್ಟಿ ಎಡ್ತೂರು, ಕೆ.ಕೆ. ಶಾಹುಲ್ ಹಮೀದ್, ಜಗದೀಶ್ ಕೊಯಿಲ, ಸುರೇಶ್ ಕುಮಾರ್ ನಾವೂರು, ರಝಾಕ್ ಕುಕ್ಕಾಜೆ, ಶಿವಪ್ಪ ಪೂಜಾರಿ,ಲೋಲಾಕ್ಷ ಶೆಟ್ಟಿ, ಲವೀನಾ ವಿಲ್ಮಾ ಮೋರಸ್, ಸದಾಶಿವ ಬಂಗೇರ, ಖಾದರ್ ಇಖ್ರಾ, ಅರ್ಶದ್ ಸರವು, ಪ್ರವೀಣ್ ರೋಡ್ರಿಗಸ್, ಸಿದ್ದೀಕ್ ಸರವು, ಸಿರಾಜ್ ಮದಕ, ವೆಂಕಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಆದಂ ಕುಂಞಿ ಸ್ವಾಗತಿಸಿ, ಸಂಪತ್ ಕುಮಾರ್ ಶೆಟ್ಟಿ ವಂದಿಸಿದರು. ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಬೇಬಿ ಕುಂದರ್ ಕಾರ್ಯಕ್ರಮ ನಿರೂಪಿಸಿದರು.