ಡೈಲಿ ವಾರ್ತೆ:17 ಮಾರ್ಚ್ 2023
ಅದೃಷ್ಟದ ಸಾಲಿಗ್ರಾಮ ಕಲ್ಲು ಎಂದು ಎರಡು ಕೋಟಿಗೆ ಮಾರಾಟಕ್ಕೆ ಯತ್ನ:ಇಬ್ಬರು ಆರೋಪಿಗಳ ಬಂಧನ
ಬೆಂಗಳೂರು: ದೇವರ ಮೇಲಿಟ್ಟಿರುವ ನಂಬಿಕೆಯನ್ನು ದುರುಪಯೋಗ ಮಾಡಿಕೊಳ್ಳುವ ವಂಚಕರು ರಾಜಧಾನಿಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದಾರೆ. ದೈವದ ಕಲ್ಲು, ಅದೃಷ್ಟದ ಕಲ್ಲು ಎಂದು ಜನರನ್ನು ನಂಬಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡಲು ಬಂದಿದ್ದ ಇಬ್ಬರು ವಂಚಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಾಕ್ಷಾತ್ ವಿಷ್ಣುಪರಮಾತ್ಮನ ಸಾಲಿಗ್ರಾಮ ಕಲ್ಲು ಎಂದು ಹೇಳಿ ರಾಜಧಾನಿಯಲ್ಲಿ ಮಾರಾಟಕ್ಕೆ ಮುಂದಾಗಿದ್ದ ಮಹಾರಾಷ್ಟ್ರ ಮೂಲದ ಮನೋಜ್ ಹಾಗೂ ಆದಿತ್ಯ ಸಾಗರ್ ಎಂಬುವರನ್ನು ಬಂಧಿಸಲಾಗಿದೆ.
ಬಂಧಿತರಿಂದ ಸಾಲಿಗ್ರಾಮದ ಎರಡು ಕಲ್ಲುಗಳು ಹಾಗೂ ಕೆಲ ರಾಸಾಯನಿಕ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚಕರಿಬ್ಬರು ರಾಜಾಜಿನಗರದ ರಾಜ್ ಕುಮಾರ್ ರಸ್ತೆಯಲ್ಲಿರುವ ಖಾಸಗಿ ಹೊಟೇಲ್ ಗೆ ಗಿರಾಕಿಗಳನ್ನು ಬರಮಾಡಿಕೊಂಡು ಮಾರಾಟಕ್ಕೆ ಮುಂದಾಗಿದ್ದರು. ಗುಜರಾತಿನ ಗೋಮತಿ ನದಿಯಿಂದ ತಂದಿರುವ ಬೆಲೆಬಾಳುವ ಸಾಲಿಗ್ರಾಮದ ಎರಡು ಕಲ್ಲುಗಳನ್ನು ತಂದು ವಿಷ್ಣುರೂಪದ ಅದೃಷ್ಟಕಲ್ಲು ಎಂದು ಕೋಟ್ಯಂತರ ರೂಪಾಯಿಗೆ ಬೆಲೆಬಾಳಲಿದೆ ಎಂದು ನಂಬಿಸಿ ಎರಡು ಕೋಟಿ ರೂಪಾಯಿಗೆ ಮಾರಾಟ ಮಾಡಲು ಯತ್ನಿಸಿದ್ದರು.
ಈ ಕಲ್ಲು ತಮ್ಮ ಆರೋಗ್ಯ ಸುಧಾರಣೆ ಮಾಡುತ್ತೆ ಅಂತ ನಂಬಿಸಿ. ಬೆಂಕಿ ಹಚ್ಚುದಿಲ್ಲ ಈ ಕಲ್ಲನ್ನು ಕೈಯಲ್ಲಿ ಇಟ್ಟುಕೊಂಡ್ರೆ ಸೂಜಿ ಕೂಡ ಚುಚ್ಚಲ್ಲ ಅಂತ ಡೆಮೋ ಮಾಡಿ ತೋರಿಸ್ತಿದ್ರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಮಹಿಳಾ ಸಂರಕ್ಷಣಾ ತಂಡ ಎಸಿಪಿ ಶಿವಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದೆ.