ಡೈಲಿ ವಾರ್ತೆ:25 ಮಾರ್ಚ್ 2023

ಅಕ್ರಮ ಹಣ ಸಾಗಾಟ: 60 ಲಕ್ಷ ರೂ. ನಗದು ಸಮೇತ ಕಾರು ವಶಕ್ಕೆ!

ಗಂಗಾವತಿ: ದಾಖಲೆ ಇಲ್ಲದ ನಗದು ಹಣ ಸಾಗಾಣಿಕೆಯನ್ನು ಗಂಗಾವತಿ ಗ್ರಾಮೀಣ ಪೊಲೀಸರು ಪತ್ತೆ ಹಚ್ಚಿ ನಗದು ಹಾಗೂ ಕಾರು ಸಮೇತ ವಶಕ್ಕೆ ಪಡೆದಿರುವ ಪ್ರಕರಣ ತಾಲೂಕು ಬಸಾಪಟ್ಟಣದ ಹತ್ತಿರ ಶುಕ್ರವಾರ ರಾತ್ರಿ 8.30ಕ್ಕೆ ನಡೆದಿದೆ.

ಚುನಾವಣಾ ಆಯೋಗ ಕಟ್ಟುನಿಟ್ಟಿನ ಆದೇಶದಂತೆ ಜಿಲ್ಲಾ ಪೊಲೀಸ್ ಇಲಾಖೆ ತಾಲೂಕು ಮತ್ತು ಗಡಿ ಭಾಗದಲ್ಲಿ ತಾತ್ಕಾಲಿಕ ಚೆಕ್ ಪೊಸ್ಟ್ ಗಳನ್ನು ನಿರ್ಮಿಸಿ, ಬರುವ ಮತ್ತು ಹೋಗುವ ವಾಹನಗಳ ಮೇಲೆ ನಿಗಾ ಇರಿಸಿದೆ. ಶುಕ್ರವಾರ ರಾತ್ರಿ 8.30.ಕ್ಕೆ ಬಸಾಪಟ್ಟಣದ ಹತ್ತಿರ ಕಾರೊಂದನ್ನು ಪರಿಶೀಲನೆ ಮಾಡಿದಾಗ ದಾಖಲೆ ಇಲ್ಲದ 60 ಲಕ್ಷ ರೂ.ಗಳನ್ನು ಹಾಗೂ ಸುಮಾರು 5 ಲಕ್ಷ ರೂ.ಮೌಲ್ಯದ ಕಾರನ್ನು ವಶಕ್ಕೆ ಪಡೆದಿದ್ದಾರೆ. ಕಾರಿನಲ್ಲಿ ವೆಂಕಟೇಶ ಸಿಂಗನಾಳ, ವೀರಭದ್ರಪ್ಪ ಪಲ್ಲೇದ್, ವಿರೂಪಾಕ್ಷ ಗೌಡ ಪಾಟೀಲ್, ಚಾಲಕ ಅಬ್ದುಲ್ ರಜಾಕ್ ಇವರನ್ನು ವಿಚಾರಣೆ ನಡೆಸಲಾಗುತ್ತಿದ್ದು ನಗದು ಹಣದ ಕುರಿತು ಮಾಹಿತಿ ನೀಡುವಂತೆ ಆದಾಯ ತೆರಿಗೆ ಅಧಿಕಾರಿಗಳಿಗೆ ಪತ್ರ ಬರೆದು ಮಾಹಿತಿ ಕೋರಲಾಗಿದೆ. ರಸ್ತೆಗಳಲ್ಲಿ ನಿರಂತರ ತಪಾಸಣಾ ಕಾರ್ಯ ಮಾಡುತ್ತಿರುವ ಡಿಎಸ್ಪಿ ಸಿಪಿಐ ಪೊಲೀಸ್ ಸಿಬ್ಬಂದಿಯವರ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧ ವಂಟಗೋಡಿ ಮಾಧ್ಯಮದವರ ಜತೆ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಸಂದರ್ಭವಾಗಿರುವುದರಿಂದ ಹಣ ಸಾಗಾಣಿಕೆ ಮಾಡುವಾಗ ಕಡ್ಡಾಯವಾಗಿ ದಾಖಲೆ ತೋರಿಸುವಂತೆ ಅವರು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.ಈ ಸಂದರ್ಭದಲ್ಲಿ ಡಿಎಸ್ಪಿ ಎಚ್.ಶೇಖರಪ್ಪ,ಸಿಪಿಐ ಮಂಜುನಾಥ, ಸುಜಾತ ಸೇರಿ ಪೊಲೀಸ್‌ ಸಿಬ್ಬಂದಿಯವರಿದ್ದರು.