ಡೈಲಿ ವಾರ್ತೆ: ಫೆ./04/2026

ಮೊಟ್ಟೆ ಹಣದಲ್ಲೂ ಭ್ರಷ್ಟಾಚಾರ: ₹6,030 ಲಂಚ ಪಡೆಯುತ್ತಿದ್ದ ಅಂಗನವಾಡಿ ಕಾರ್ಯಕರ್ತೆ–ಮೇಲ್ವಿಚಾರಕಿ ಲೋಕಾಯುಕ್ತ ಬಲೆಗೆ

ಕಲಬುರಗಿ, ಫೆ. 4: ಮೊಟ್ಟೆ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಲಂಚಕ್ಕೆ ಬೇಡಿಕೆ ಇಟ್ಟು ಸ್ವೀಕರಿಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಮೇಲ್ವಿಚಾರಕಿಯನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಲೆಗೆ ಬೀಳಿಸಿದ್ದಾರೆ.

ನಗರದ ಸ್ಟೇಷನ್ ಬಜಾರ್ ಅಂಗನವಾಡಿ ಕಾರ್ಯಕರ್ತೆ ಹೀನಾ ಹಾಗೂ ಅಂಗನವಾಡಿ ಮೇಲ್ವಿಚಾರಕಿ ಪಿಂಕುಬಾಯಿ ಗಾಯಕವಾಡ ಬಂಧಿತ ಆರೋಪಿಗಳು.

ಉದಯ ನಗರ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಸೌಭಾಗ್ಯ ಬಲಭೀಮ ರಾಠೋಡ ಅವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ದೂರುದಾರರ ಅಂಗನವಾಡಿ ಕೇಂದ್ರಕ್ಕೆ ಮೂರು ತಿಂಗಳ ಮೊಟ್ಟೆ ಹಣವಾಗಿ ₹14,490 ಜಮೆ ಆಗಿದ್ದು, ಅದರಲ್ಲಿ ಒಂದು ತಿಂಗಳ ಮೊಟ್ಟೆ ಹಣ ₹4,830 ಹಾಗೂ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿಗೆ ತಲಾ ₹600ರಂತೆ ಒಟ್ಟು ₹1,200 ಸೇರಿಸಿ ₹6,030 ಲಂಚ ನೀಡುವಂತೆ ಆರೋಪಿಗಳು ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಈ ಸಂಬಂಧ ಲೋಕಾಯುಕ್ತ ಎಸ್ಪಿ ಸಿದ್ಧರಾಜು ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್–2 ರಾಜಶೇಖರ ಬಡದೆಸಾರ ನೇತೃತ್ವದ ತಂಡವು ಬುಧವಾರ ದಾಳಿ ನಡೆಸಿ ಆರೋಪಿಗಳನ್ನು ಲಂಚ ಸ್ವೀಕರಿಸುತ್ತಿದ್ದ ಕ್ಷಣದಲ್ಲೇ ಬಂಧಿಸಿದೆ.

ಆರೋಪಿಗಳ ವಿರುದ್ಧ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.