
ಡೈಲಿ ವಾರ್ತೆ: ಫೆ./05/2026
ಅಮ್ಮ ಬೈದಿದ್ದಕ್ಕೆ ಮನೆ ಬಿಟ್ಟು ಹೊರಟ ಅಕ್ಕ-ತಮ್ಮ: ಆಧಾರ್ ಕಾರ್ಡ್ ಹಿಡಿದು ಉಚಿತ ಬಸ್‌ನಲ್ಲಿ ರಾಜ್ಯ ಸುತ್ತಾಟ, ಪೊಲೀಸರ ಅಲರ್ಟ್‌ನಿಂದ ಸುರಕ್ಷಿತ ಪತ್ತೆ

ಬೆಂಗಳೂರು, ಫೆ. 5: ಟ್ಯೂಷನ್‌ಗೆ ಹೋಗಲು ಹಾಗೂ ಓದಲು ಬೈದಿದ್ದಕ್ಕೆ ಮನನೊಂದ 13 ವರ್ಷದ ಬಾಲಕಿ ಹಾಗೂ ಆಕೆಯ 9 ವರ್ಷದ ತಮ್ಮ ಮನೆ ಬಿಟ್ಟು ಹೊರಟ ಘಟನೆ ಬೆಂಗಳೂರಿನ ಮಾರತಹಳ್ಳಿ ಅಶ್ವತ್ಥನಗರದಲ್ಲಿ ನಡೆದಿದೆ.
ಫೆಬ್ರವರಿ 1ರಂದು ಮಧ್ಯಾಹ್ನ ಸುಮಾರು 3 ಗಂಟೆ ಸುಮಾರಿಗೆ, ಯಾರಿಗೂ ತಿಳಿಸದೇ ಮನೆಯಿಂದ ಹೊರಟಿದ್ದ ಮಕ್ಕಳು ಕಾಣಿಸದಿರುವುದರಿಂದ ಆತಂಕಗೊಂಡ ಪೋಷಕರು ಹೆಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸರ್ಕಾರದ ‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯವಿರುವುದು ಬಾಲಕಿಗೆ ತಿಳಿದಿತ್ತು. ತನ್ನ ಬಳಿಯಿದ್ದ ಆಧಾರ್ ಕಾರ್ಡ್ ಹಿಡಿದುಕೊಂಡು, ತಮ್ಮನನ್ನು ಜೊತೆಗಿಸಿಕೊಂಡು ಕೆಎಸ್‌ಆರ್‌ಟಿಸಿ ಬಸ್ ಹತ್ತಿದ ಬಾಲಕಿ, ಯಾವುದೇ ಹಣವಿಲ್ಲದೆ ಚಿತ್ರದುರ್ಗ, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಚರಿಸಿದ್ದಾಳೆ.
ಪೋಷಕರ ದೂರು ಬಂದ ತಕ್ಷಣವೇ ಹೆಚ್‌ಎಎಲ್ ಪೊಲೀಸರು ಅಲರ್ಟ್ ಆಗಿದ್ದು, ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸುವುದರ ಜೊತೆಗೆ, ಮಕ್ಕಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇಂಟರ್ನೆಟ್‌ನಲ್ಲಿ ಮಕ್ಕಳ ಚಿತ್ರಗಳನ್ನು ಕಂಡ ಚಿತ್ರದುರ್ಗದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ ಪರಿಣಾಮ, ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಮಕ್ಕಳನ್ನು ಸುರಕ್ಷಿತವಾಗಿ ಪತ್ತೆಹಚ್ಚಿ, ಬೆಂಗಳೂರಿಗೆ ಕರೆತಂದು ಪೋಷಕರ ಮಡಿಲಿಗೆ ಒಪ್ಪಿಸಿದ್ದಾರೆ.
ಉಚಿತ ಪ್ರಯಾಣ ಸೌಲಭ್ಯ ಬಾಲಕಿಗೆ ಇದ್ದರೂ, 9 ವರ್ಷದ ಬಾಲಕನಿಗೆ ಟಿಕೆಟ್ ಪಡೆಯದೆ ಬಸ್‌ನಲ್ಲಿ ಪ್ರಯಾಣಿಸಿದ್ದ ಸಂಗತಿ ಬಸ್ ನಿರ್ವಾಹಕರ ಗಮನಕ್ಕೂ ಬಾರದಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.