ಡೈಲಿ ವಾರ್ತೆ: ಫೆ./05/2026

ಕ್ರೂಸರ್ – ಕ್ಯಾಂಟರ್ ನಡುವೆ ಭೀಕರ ಅಪಘಾತ: ಮೂವರು ಮಹಿಳೆಯರು ಸ್ಥಳದಲ್ಲೇ ಸಾವು

ಗದಗ, ಫೆಬ್ರವರಿ 5: ಕ್ರೂಸರ್ ಹಾಗೂ ಕ್ಯಾಂಟರ್ ವಾಹನಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ರೈತ ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರೋಣ ತಾಲ್ಲೂಕಿನ ಜಿಗಳೂರ ಕ್ರಾಸ್ ಬಳಿ ಮಂಗಳವಾರ ನಡೆದಿದೆ.

ಮೃತರನ್ನು ಗಜೇಂದ್ರಗಡದ ಶಿವಾಜಿಪೇಟೆ ನಿವಾಸಿಗಳಾದ ಅನ್ನಪೂರ್ಣ (56), ಸಂಗೀತ ಹೊಸಮನಿ (48) ಹಾಗೂ ಮರಿಯಂಬೂ ಹುನಗುಂದ (55) ಎಂದು ಗುರುತಿಸಲಾಗಿದೆ. ಇವರು ಕೃಷಿ ಕೆಲಸಕ್ಕಾಗಿ ರೋಣಕ್ಕೆ ಕಡಲೆ ಕೀಳಲು ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಇತರರನ್ನು ತಕ್ಷಣ ಗದಗದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಘಟನಾ ಸ್ಥಳಕ್ಕೆ ರೋಣ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಿಮ್ಸ್ ಆಸ್ಪತ್ರೆ ಮುಂಭಾಗದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ.