

ಡೈಲಿ ವಾರ್ತೆ: ಫೆ./05/2026
‘ಎಲ್ಲ ಮೊಗವೀರರ ಕಚ್ಚೆ ಒಗೆಯಲು ಸಾಧ್ಯವಿಲ್ಲ’ ಹೇಳಿಕೆ ವಿವಾದ: ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಅಧ್ಯಕ್ಷರ ವಿರುದ್ಧ ಕೋಟ ನಾಗೇಂದ್ರ ಪುತ್ರನ್ ಆಕ್ರೋಶ

ಉಡುಪಿ: ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಅಧ್ಯಕ್ಷ ಜಯಂತ್ ಅಮಿನ್ ಅವರು “ಎಲ್ಲ ಮೊಗವೀರರ ಕಚ್ಚೆ ಒಗೆಯಲು ಸಾಧ್ಯವಿಲ್ಲ” ಎಂಬ ಹೇಳಿಕೆ ನೀಡಿರುವುದು ಮೊಗವೀರ ಸಮುದಾಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಹೇಳಿಕೆ ಸಮುದಾಯದ ವಿರುದ್ಧ ಅವಮಾನಕಾರಿಯಾಗಿದೆ ಎಂದು ಆರೋಪಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಅವರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ಎರಡು ದಿನಗಳ ಹಿಂದೆ ರಾತ್ರಿ ಸುಮಾರು 9.30ರ ವೇಳೆಗೆ ದೇವೇಂದ್ರ ಸುವರ್ಣ ಎಂಬವರು ಕರೆ ಮಾಡಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಕ್ಷತಾ ಪೂಜಾರಿ ಸಂಬಂಧಿತ ಪ್ರಕರಣದ ಕುರಿತು ಚರ್ಚೆ ನಡೆಸಿದರು.
ಅಕ್ಷತಾ ಪೂಜಾರಿ ಅವರ ಪರವಾಗಿ ಇಡೀ ಸಮುದಾಯ ನಿಂತಿದ್ದರೂ, ತಮ್ಮ ಮೇಲಾದ ಅನ್ಯಾಯಕ್ಕೆ ಸಂಬಂಧಿಸಿದಂತೆ ಸಮುದಾಯದ ಮುಖಂಡರಿಂದ ಯಾವುದೇ ಸಹಾಯ ದೊರೆಯುತ್ತಿಲ್ಲ ಎಂದು ದೇವೇಂದ್ರ ಸುವರ್ಣ ದೂರಿದ್ದಾರೆ ಎಂದು ನಾಗೇಂದ್ರ ಪುತ್ರನ್ ತಿಳಿಸಿದ್ದಾರೆ.
ದೇವೇಂದ್ರ ಸುವರ್ಣ ಅವರ ಹೇಳಿಕೆಯ ಪ್ರಕಾರ, ಸಹಾಯಕ್ಕಾಗಿ ಜಿಲ್ಲಾ ಮೊಗವೀರ ಯುವ ಸಂಘಟನೆ ಅಧ್ಯಕ್ಷರನ್ನು ಸಂಪರ್ಕಿಸಿದಾಗ, “ನಿಜವಾದ ಮೊಗವೀರರಾಗಿದ್ದರೆ 4 ರಿಂದ 5 ವರ್ಷ ಸಂಘಟನೆಯಲ್ಲಿ ಗುರುತಿಸಿಕೊಂಡಿರಬೇಕು, ಸುಮ್ಮನೆ ಎಲ್ಲರಿಗೂ ಸಹಾಯ ಮಾಡಲು ಸಾಧ್ಯವಿಲ್ಲ, ಎಲ್ಲರ ಕಚ್ಚೆ ಒಗೆಯಲು ಆಗುವುದಿಲ್ಲ” ಎಂದು ಹೇಳಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಈ ಮಾತಿಗೆ ವಿರೋಧ ವ್ಯಕ್ತಪಡಿಸಿದ ಕೋಟ ನಾಗೇಂದ್ರ ಪುತ್ರನ್ ಅವರು, ಮೊಗವೀರ ಸಮುದಾಯದ ಹೆಸರಿನಲ್ಲಿ ನಡೆಯುವ ರಕ್ತದಾನ ಶಿಬಿರಗಳಲ್ಲಿ ಸಾವಿರಾರು ಯುವಕರು ಸೇವೆ ಸಲ್ಲಿಸುತ್ತಿರುವಾಗ, ಅನ್ಯಾಯಕ್ಕೊಳಗಾದ ಒಬ್ಬ ಸಮುದಾಯದ ವ್ಯಕ್ತಿಗೆ ಸಹಾಯ ನಿರಾಕರಿಸುವುದು ದುರಹಂಕಾರ ಎನ್ನುವುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.
ಫೋನ್ ಸಂಭಾಷಣೆಯನ್ನು ರೆಕಾರ್ಡ್ ಮಾಡಿ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂಬ ಆರೋಪವನ್ನೂ ಅವರು ಮುಂದಿಟ್ಟಿದ್ದಾರೆ. ಸಂಭಾಷಣೆಯ ವೇಳೆ ಕೋಪದಲ್ಲಿ ಡಾ. ಜಿ. ಶಂಕರ್ ಅವರ ಬಗ್ಗೆ ಮಾತನಾಡಿರುವುದಕ್ಕೆ ಅವರು ಕ್ಷಮೆಯಾಚಿಸಿದ್ದು, ಇಂತಹ ಹೇಳಿಕೆ ನೀಡುವವರನ್ನು ಜಿಲ್ಲಾ ಮೊಗವೀರ ಯುವ ಸಂಘಟನೆ ಅಧ್ಯಕ್ಷರಾಗಿ ಮುಂದುವರಿಸಬಾರದು ಎಂದು ಡಾ. ಜಿ. ಶಂಕರ್ ಅವರಲ್ಲಿ ಮನವಿ ಮಾಡುತ್ತೇನೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ನಾಗೇಂದ್ರ ಪುತ್ರನ್ ತಿಳಿಸಿದ್ದಾರೆ.