ಡೈಲಿ ವಾರ್ತೆ:27 ಮಾರ್ಚ್ 2023

ಪರವಾನಿಗೆ ಇಲ್ಲದೆ ಅಕ್ರಮವಾಗಿ ವಾಹನದಲ್ಲಿ ಸಾಗಿಸುತ್ತಿದ್ದ 47 ಲಕ್ಷ ರೂ‌. ಮೌಲ್ಯದ ಮದ್ಯ ವಶ

ವಿಜಯಪುರ: ಜಿಲ್ಲೆಯ ಅಬಕಾರಿ ಅಧಿಕಾರಿಗಳು ಪರವಾನಿಗೆ ಇಲ್ಲದೆ ವಾಹನದಲ್ಲಿ ಸಾಗಿಸುತ್ತಿದ್ದ 47 ಲಕ್ಷ ರೂ. ಮೌಲ್ಯದ ಮದ್ಯವನ್ನು ಧೂಳಖೇಡ ಚಕ್ ಪೋಸ್ಟ್ ನಲ್ಲಿ ವಶಕ್ಕೆ ಪಡೆದಿದ್ದಾರೆ.ತುಮಕೂರು ಮೂಲದ ಫೈರೋಜ್ ಸೈಯದ್ ಅಬ್ದುಲ್ ರೆಹಮಾನ್ ಎಂಬ ಚಾಲಕನ ವಿರುದ್ಧ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಧೂಳಖೇಡ ಚಕ್ ಪೋಸ್ಟ್ ಬಳಿ ಆರೋಪಿ ಚಾಲಕ ಕೆಎ 40-3862 ನೋಂದಣಿ ಲಾರಿಯಲ್ಲಿ ರಹದಾರಿ ಪಡೆದಿದ್ದ ಲಾರಿಯಲ್ಲಿ ಸಾಗುತ್ತಿದ್ದಾಗ ಅಬಕಾರಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ವೇಳೆ 330 ಎಂ.ಎಲ್. ನ 1160 ಬಿಯರ್ ಮದ್ಯ ಸಾಗಿಸುತ್ತಿದ್ದುದು ಪತ್ತೆಯಾಗಿದೆ. ದಾಖಲೆ ಪರಿಶೀಲನೆ ನಡೆಸಿದಾಗ ಪರವಾನಿಗೆ ಪಡೆದಿದ್ದ ವಾಹನದ ಬದಲಾಗಿ ಅನ್ಯ ವಾಹನದಲ್ಲಿ ಮದ್ಯ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅಬಕಾರಿ ನಿರೀಕ್ಷಕರು ಇಂಡಿ ವಲಯ, ತನಿಖಾ ಠಾಣೆ ಅಬಕಾರಿ ಉಪ ನಿರೀಕ್ಷಕರು ಸಿಬ್ಬಂದಿಗಳು ಸೇರಿಕೊಂಡು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಮದ್ಯ ಸಾಗಿಸುತ್ತಿದ್ದ 10 ಲಕ್ಷ ರೂ. ಮೌಲ್ಯದ ವಾಹನ, ವಾಹನದಲ್ಲಿದ್ದ 47,38,851 ರೂ. ಮೌಲ್ಯದ ಬೀಯರ್, ರಹದಾರಿ ಕಾಗದ ಪತ್ರಗಳನ್ನು ಜಪ್ತಿ ಮಾಡಿದ್ದಾರೆ.