

ಡೈಲಿ ವಾರ್ತೆ: ಫೆ./04/2026


ಭಟ್ಕಳದ ಗುಲ್ಮಿ ಸೇತುವೆ ಬಳಿ ರೈಲು ಹಳಿ ಮೇಲೆ ಯುವಕನ ಶವ ಪತ್ತೆ – ರೈಲು ಡಿಕ್ಕಿ ಶಂಕೆ!

ಭಟ್ಕಳ, ಫೆ. 4: ಭಟ್ಕಳ ತಾಲ್ಲೂಕಿನ ಗುಲ್ಮಿ ಸೇತುವೆ ಸಮೀಪದ ರೈಲ್ವೆ ಹಳಿಗಳ ಮೇಲೆ ಬುಧವಾರ ಮಧ್ಯಾಹ್ನ ಯುವಕನ ಮೃತದೇಹ ಪತ್ತೆಯಾಗಿದ್ದು, ಸ್ಥಳದಲ್ಲಿ ಆತಂಕ ಮೂಡಿದೆ.

ಮೃತನನ್ನು ಗುಲ್ಮಿ ನಿವಾಸಿ ಮುಹಮ್ಮದ್ ನಾಸಿರ್ ಶೇಖ್ ಹುಸೇನ್ (33) ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ನಾಸಿರ್ ಅವರಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಸಾಧ್ಯತೆ ಇದೆ.
ಮೃತದೇಹವು ರೈಲ್ವೆ ಹಳಿಗಳ ಮೇಲೆ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ದೇಹದ ಮೇಲೆ ಗಂಭೀರ ಗಾಯಗಳು ಹಾಗೂ ಹರಿದ ಬಟ್ಟೆಗಳು ಕಂಡುಬಂದಿವೆ. ಇದರಿಂದ ರೈಲು ಅಪಘಾತ ಸಂಭವಿಸಿರುವ ಶಂಕೆ ಮತ್ತಷ್ಟು ಗಟ್ಟಿಯಾಗಿದೆ.
ಘಟನೆಯ ಮಾಹಿತಿ ಪಡೆದ ರೈಲ್ವೆ ಪೊಲೀಸರು ಹಾಗೂ ಸ್ಥಳೀಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಪ್ರಕರಣದ ಕುರಿತು ಹೆಚ್ಚಿನ ವಿವರಗಳನ್ನು ಸಂಗ್ರಹಿಸಲಾಗುತ್ತಿದ್ದು, ಸಾವು ಅಪಘಾತವೇ ಅಥವಾ ಇತರೆ ಕಾರಣಗಳಿವೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.